ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ, 13ಸಾವಿರ ದಂಡ!

0
Spread the love

ಗದಗ:- ಯುವತಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣವೊಂದರಲ್ಲಿ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಗದಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.

Advertisement

ಸರಿಸುಮಾರು 7 ವರ್ಷಗಳ ಹಿಂದಿನ ಪ್ರಕರಣ ಇದಾಗಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಇಂದು ಶಿಕ್ಷೆ ಪ್ರಕಟಿಸಿದೆ.

ಜಿಲ್ಲೆಯ ಗಜೇಂದ್ರಗಡದ ಗುರುರಾಜ ನಿಂಗಪ್ಪ ಚವ್ಹಾಣ ಎಂಬಾತನಿಗೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ಕೊಟ್ಟಿದೆ. ಈತ ಇದೇ ಗ್ರಾಮದ ಲಂಬಾಣಿ ಸಮುದಾಯದ ಯುವತಿಯೊಬ್ಬಳ ಮೇಲೆ 2017ರ ಮೇ 16 ರಂದು ರಾತ್ರಿ 11 ಗಂಟೆ ವೇಳೆಗೆ ಜೀವ ಬೆದರಿಕೆಯೊಡ್ಡಿ ಅತ್ಯಾಚಾರ ನಡೆಸಿದ್ದ. ಅಷ್ಟೇ ಅಲ್ಲದೇ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದ.

ಮೋಸ ಹೋದ ಸಂತ್ರಸ್ತ ಯುವತಿಯು ಗಜೇಂದ್ರಗಡ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಅಂದಿನ ಸಿಪಿಐ ಎಸ್.ಎಸ್.ಬೀಳಗಿ ಹಾಗೂ ಕೆ.ಸಿ.ಪ್ರಕಾಶ್ ಅವರು ವಿಚಾರಣೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಇದೀಗ ವಿಚಾರಣೆಯಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 10 ವರ್ಷ ಜೈಲು ಹಾಗೂ 13 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ಕೊಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಪರವಾಗಿ ಸವಿತಾ ಶಿಗ್ಲಿ ಅವರು ವಾದ ಮಂಡಿಸಿದರು.


Spread the love

LEAVE A REPLY

Please enter your comment!
Please enter your name here