10 ಕ್ವಿಂಟಲ್ ಈರುಳ್ಳಿಗೆ ಸಿಕ್ಕಿದ್ದು 170 ರೂ.! ಬೆಲೆ ಕುಸಿತ, ಸಾಲದ ಹೊರೆಯೊಂದಿಗೆ ಬಂದ ಅನ್ನದಾತ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಸತತ ಮಳೆಯಿಂದ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತ ಈಗ ಮಾರುಕಟ್ಟೆಗೆ ಬೆಳೆಯನ್ನು ಒಯ್ದರೆ ಸರಿಯಾದ ಬೆಲೆಯೂ ಬರುತ್ತಿಲ್ಲ. 10 ಕ್ವಿಂಟಲ್ ಈರುಳ್ಳಿ ಮಾರಿದ ರೈತರೊಬ್ಬರಿಗೆ ಖರ್ಚು ಕಳೆದು ಕೇವಲ 170 ರೂ. ಪಾವತಿಯಾಗಿದೆ!

ಆದರೆ, ಬೆಂಗಳೂರಿಗೆ ಹೋಗಿ, ಈರುಳ್ಳಿ ಮಾರಾಟ ಮಾಡಲು ಹಾಗೂ ಹಮಾಲಿ ಸೇರಿ 6,000 ರೂ. ಖರ್ಚಾಗಿದ್ದರಿಂದ ಅಷ್ಟೂ ಸಾಲದ ಹೊರೆ ರೈತನ ಮೇಲೆ ಬಿದ್ದಿದೆ.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕು ಸ್ವಲ್ಪ ಹಣ ಸಂಪಾದಿಸಬಹುದೆಂಬ ಅಲ್ಪ ಆಸೆಯೊಂದಿಗೆ ಬೆಂಗಳೂರಿಗೆ ಈರುಳ್ಳಿ ಮಾರಲು ಹೋದ ರೈತ ಸಾಲದ ಹೊರೆಯೊಂದಿಗೆ ಮರಳಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಸಮಿಪದ ಕೋಟುಮಚಗಿ ಗ್ರಾಮದ ರೈತ ಅಂಬರೀಶ್ ಅಬ್ಬಿಗೇರಿ ತನ್ನ ನಾಲ್ಕೂವರೆ ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಈಗಾಗಲೇ ಎರಡು ಹಂತದಲ್ಲಿ ಈರುಳ್ಳಿ ಬೆಳೆ ಮಾರಾಟ ಮಾಡಿದ್ದು, 118 ಮೂಟೆಗಳಿಗೆ ಒಟ್ಟು 76,000 ರೂ. ಬಂದು ತುಸು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿತ್ತು. ಉಳಿದ 20 ಚೀಲ ಈರುಳ್ಳಿಯನ್ನು ಮಾರಾಟ ಮಾಡಲು ಸೋಮವಾರ (ನ.29) ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಶ್ರೀಉಮಾಶಂಕರ ಟ್ರೇಡರ್ಸ್ ದಲಾಲಿ ಅಂಗಡಿಯಲ್ಲಿ ಇರಿಸಿದ್ದರು.

ಕ್ವಿಂಟಲ್‌ಗೆ ಕೇವಲ 400, 300 ಹಾಗೂ 100 ರೂ.ಗೆ ಮಾರಾಟ ಆಗಿದೆ. ಒಟ್ಟು 10 ಕ್ವಿಂಟಲ್ ತೂಗಿದ್ದು, ಒಟ್ಟು ವ್ಯಾಪಾರದಿಂದ 2,420 ರೂ. ಹಣ ಬಂದಿದೆ. ಲಾರಿ ಬಾಡಿಗೆ, ಹಮಾಲಿ ಹಣ ಕಳೆದು 170 ರೂ. ಮರಳಿ ಬಂದಿದೆ. ಇದನ್ನು ನೋಡಿ ರೈತ ಕಂಗಾಲಾಗಿ ಬರಿಗೈಯಲ್ಲಿ ವಾಪಸ್ ಬರುವಂತಾಗಿದೆ.

ಬೆಂಗಳೂರಿನ ಮಾರುಕಟ್ಟೆಗೆ ಒಯ್ದ 20 ಮೂಟೆ ಪೈಕಿ ದೊಡ್ಡ ಈರುಳ್ಳಿಗೆ 200 ರೂ., ಸಣ್ಣದಕ್ಕೆ 150 ರೂ. ಹಾಗೂ ಮಧ್ಯಮ ಗಾತ್ರದ ಉಳ್ಳಾಗಡ್ಡಿ ಕೇವಲ 50 ರೂ.ಗೆ ಮಾರಾಟವಾಗಿದೆ. ಒಂದು ಮೂಟೆ ಮಾರುಕಟ್ಟೆಗೆ ಬಂದು ಬೀಳಬೇಕಾದರೆ, ಸುಮಾರು 500 ರೂ. ಖರ್ಚಾಗುತ್ತದೆ.

20 ಮೂಟೆಗಳಿಗೆ 1008 ಕೆ.ಜಿ. ತೂಕ ಬಂದಿದ್ದು, ಒಟ್ಟು 2,425 ರೂ. ಪಟ್ಟಿಯಾಗಿದೆ. ಅದರಲ್ಲಿ ಹಮಾಲಿ 141 ರೂ. ಹಾಗೂ ಸರಕು ಸಾಗಾಣೆ ವೆಚ್ಚ 2,113 ರೂ. ಕಡಿತಗೊಂಡು ರೈತನ ಕೈಗೆ ಕೇವಲ 170 ರೂ. ಮಾತ್ರ ಸಿಕ್ಕಿದೆ. ಇದು ರೈತನಿಗೆ ಆಶ್ಚರ್ಯವನ್ನುಂಟು ಮಾಡಿದ್ದಲ್ಲದೇ, ನೆಲಕ್ಕೆ ಕುಸಿಯುವಂತೆ ಮಾಡಿದೆ.

ಬೆಲೆಗಿಂತ ಕೂಲಿ ಹಣವೇ ಅಧಿಕ!

ಹವಾಮಾನ ವೈಪರೀತ್ಯದಿಂದಾಗಿ ಹಲವು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಕೊಳೆಯುವ ಸ್ಥಿತಿಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆಯೂ ಕುಸಿದಿದೆ. ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಆಗಬಾರದು ಎಂಬ ಕಾರಣಕ್ಕೆ ಸಿಕ್ಕ ಬೆಲೆ ಮಾರಾಟ ಮಾಡುತ್ತಿದ್ದಾರೆ.

ಜಮೀನಿನಲ್ಲಿರುವ ಈರುಳ್ಳಿ ಕಿತ್ತು ಹಾಕಲು ಒಬ್ಬ ಕೂಲಿ ಕಾರ್ಮಿಕರಿಗೆ 300 ರೂ. ಕೂಲಿ ಇದ್ದು, ಒಂದು ಬುಟ್ಟಿ ಉಳ್ಳಾಗಡ್ಡಿ ಹೆಚ್ಚಲು (ಕೊಯ್ಯಲು) 20 ರೂ. ನೀಡಬೇಕು. ಕೆಲಸಕ್ಕೆ ಇದ್ದೂರಲ್ಲಿ ಕೂಲಿ ಕಾರ್ಮಿಕರು ಸಿಗದ ಕಾರಣ 2,000 ಸಾವಿರ ರೂ. ವಾಹನ ಬಾಡಿಗೆ ಕೊಟ್ಟು 30 ಕಿ.ಮೀ.ನಿಂದ ತರಿಸಬೇಕು. ರೈತನಿಗೆ ಈರುಳ್ಳಿ ಬೆಲೆಗಿಂತ ಕೂಲಿ ಹಣವೇ ಜಾಸ್ತಿ ಹೊರೆಯಾಗುತ್ತಿದೆ.

ಸರ್ಕಾರ ಬೇಗನೆ ಮಧ್ಯೆ ಪ್ರವೇಶಿಸಿ, ಬೆಂಬಲ ಬೆಲೆಗೆ ಈರುಳ್ಳಿ ಹಾಗೂ ಇತರ ಬೆಳೆಗಳನ್ನು ಖರೀದಿಸಿ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಆಗ್ರಹಿಸಿದ್ದಾರೆ.

ಬೆಂಗಳೂರಿಗೆ ಹೋಗಲು ಕಾರಣ…

ರಾಜ್ಯದಲ್ಲಿ ಬೆಂಗಳೂರು ಮಾರುಕಟ್ಟೆ ದೊಡ್ಡದಾಗಿದ್ದು, ಇಲ್ಲಿ ಖರೀದಿದಾರರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ನಂಬಿಕೆಯಿಂದ ರೈತರು ಅಲ್ಲಿಗೆ ಹೋಗುತ್ತಿದ್ದಾರೆ. ಗದಗ ಮಾರುಕಟ್ಟೆಯಂತೆ, ಇಲ್ಲಿ ರೈತರಿಂದ ಹೆಚ್ಚು ದಲ್ಲಾಳಿ (ಕಮಿಷನ್) ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಹತ್ತಿರದ ಗದಗ, ಹುಬ್ಬಳ್ಳಿ ಮಾರುಕಟ್ಟೆಗಳನ್ನು ಬಿಟ್ಟು ಬೆಂಗಳೂರಿಗೆ ಈರುಳ್ಳಿ ಮೂಟೆ ತೆಗೆದುಕೊಂಡು ಹೋಗಲು ಆರ್ಥಿಕ ಹೊರೆಯಾಗುತ್ತಿದ್ದರೂ ಲಾಭದಾಸೆಗೆ ಹೋಗಲಾಗುತ್ತಿದೆ. ಆದರೆ, ಸದ್ಯದ ಮಾರುಕಟ್ಟೆಯ ಬೆಲೆಯಿಂದಾಗಿ ರೈತ ವರ್ಷಾನುಗಟ್ಟಲೆ ದುಡಿದ ಸಂಬಳವೂ ಸಿಗದಂತಾಗಿದೆ.

ರೈತ ಮಾರುಕಟ್ಟೆಗೆ ಬೆಳೆ ಮಾರಾಟ ಮಾಡಲು ಹೋದರೆ ಖರೀದಿದಾರರು, ವರ್ತಕರಾಗಲಿ ಯಾರೂ ಸರಿಯಾಗಿ ಸ್ಪಂದಿಸುವುದಿಲ್ಲ. ಇನ್ನು ಈರುಳ್ಳಿ ಬೆಲೆ ಕುಸಿತದಿಂದಾಗಿ ಈರುಳ್ಳಿ ಬೆಳೆಗಾರರು ಸೂಕ್ತ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಮಾರುಕಟ್ಟೆಗೆ ಬೆಳೆ ಮಾರಾಟ ಮಾಡಲು ಹೋದರೂ ಒಂದು ರೂ. ಲಾಭಾಂಶ ಪಡೆಯದೇ ಬರಿಗೈಯಲ್ಲೇ ವಾಪಾಸ್ ಆಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು.

ಅಂಬರೀಶ್ ಅಬ್ಬಿಗೇರಿ, ರೈತ

Spread the love

LEAVE A REPLY

Please enter your comment!
Please enter your name here