ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ದೇಶದ ಜನರು ಕೊರೊನಾ ಹಾಗೂ ಅದರ ನಿಯಂತ್ರಣಕ್ಕೆ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆಯ ಬಿಸಿ, ಮತ್ತೊಂದೆಡೆ ಇಂಧನ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.
ಇಷ್ಟು ದಿನ ಬೇರೆ ಬೇರೆ ರಾಜ್ಯಗಳಲ್ಲಿ ಇಂಧನ ತೈಲ ಶತಕ ಬಾರಿಸುತ್ತಿರುವುದು ವರದಿಯನ್ನು ಓದುತ್ತಿದ್ದೇವು. ಆದರೆ ಇದೀಗ ರಾಜ್ಯದಲ್ಲೂ ಪೆಟ್ರೋಲ್ ದರ ಶತಕ ಬಾರಿಸಿ, ಮುನ್ನುಗ್ಗುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕೊಂಚ ಹೆಚ್ಚಾಗಿರುವುದು ಸತ್ಯವೇ ಆಗಿದ್ದರು, ಅದರ ಜೊತೆಗೆ ತೆರಿಗೆಗಳು ಹಾಗೂ ಇತರ ವೆಚ್ಚ ಗಳು ಸೇರಿ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ಮೇ 4ರಿಂದ ಇಲ್ಲಿಯವರೆಗೆ ಒಟ್ಟು 20 ಬಾರಿ ದರ ಏರಿಕೆ ಕಂಡುಬಂದಿದೆ.
ದೇಶದ ಆರು ರಾಜ್ಯಗಳಲ್ಲಿ ರವಿವಾರದಿಂದ ಪ್ರತೀ ಲೀಟರ್ ಪೆಟ್ರೋಲ್ ದರ 100 ರೂ. ಗಡಿ ದಾಟಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಲಡಾಖ್‌ಗಳಲ್ಲಿ ಈ ಏರಿಕೆ ದಾಖಲಾಗಿದೆ. ರಾಜ್ಯದಲ್ಲಿ ಬಳ್ಳಾರಿಯಲ್ಲಿ ರವಿವಾರ ಪ್ರತೀ ಲೀಟರ್ ಪೆಟ್ರೋಲ್ ದರ 100.08 ರೂ., ಶಿರಸಿಯಲ್ಲಿ 100.29 ರೂ. ಇತ್ತು. ಇನ್ನು ಕೆಲವು ಜಿಲ್ಲೆಗಳಲ್ಲಿ ಶತಕದ ಸಮೀಪ ಇದೆ.