ಶೇ. 100 ಗುರಿಸಾಧನೆ ನಮ್ಮ ಧ್ಯೇಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ದೂರವಾಗಿರುವ ಅರ್ಹ ಕುಟುಂಬಗಳನ್ನು ಪಂಚ ಗ್ಯಾರಂಟಿ ಯೋಜನೆ ವ್ಯಾಪ್ತಿಗೆ ಸೇರಿಸಲು ರಾಜ್ಯದಲ್ಲೇ ಮೊದಲ ಬಾರಿಗೆ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ನೇತೃತ್ವದಲ್ಲಿ ಆರಂಭಿಸಲಾಗಿದ್ದ ವಿಶೇಷ ಅಭಿಯಾನವನ್ನು ಪುನಃ ಮುಂದುವರಿಸಲಾಗಿದೆ.

Advertisement

ವಿಶೇಷ ಅಭಿಯಾನದಲ್ಲಿ ಗೃಹಲಕ್ಷ್ಮೀ, ಗೃಹಜ್ಯೋತಿ, ಯುವ ನಿಧಿಗೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿಗಳು ಸೇರಿ ಒಂದೇ ದಿನದಲ್ಲಿ ಒಟ್ಟು 150ಕ್ಕೂ ಅಧಿಕ ಅರ್ಜಿಗಳು ಸ್ವೀಕೃತಗೊಂಡವು.

ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಗಳ ಅನುಷ್ಠಾನದಿಂದ ಗದಗ ತಾಲೂಕು, ಜಿಲ್ಲೆ ಸೇರಿ ರಾಜ್ಯಾದ್ಯಂತ ಬಡತನ ರೇಖೆಯಲ್ಲಿದ್ದ ಕುಟುಂಬಗಳನ್ನು ಆರ್ಥಿಕವಾಗಿ ಮೇಲೆತ್ತಲು ಸಹಕಾರಿಯಾಗಿದೆ. ಈಗಾಗಲೇ ಗದಗ ತಾಲೂಕಿನಲ್ಲಿ ಶೇ. 98ಕ್ಕೂ ಅಧಿಕ ಕುಟುಂಬಗಳು ಪಂಚ ಗ್ಯಾರಂಟಿ ಯೋಜನೆಗಳ ಸದುಪಯೋಗಪಡಿಸಿಕೊಂಡಿದ್ದಾರೆ.

ಉಳಿದ ಅರ್ಹ ಫಲಾನುಭವಿಗಳನ್ನು ಯೋಜನೆಯ ವ್ಯಾಪ್ತಿಗೆ ಸೇರಿಸಲು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಸಲಹೆಯಂತೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ರೇಷನ್ ಕಾರ್ಡ್ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ, ಕುಟುಂಬದ ಸದಸ್ಯರ ಫೊಟೊ ಬದಲಾವಣೆ, ಕುಟುಂಬದ ಮುಖ್ಯಸ್ಥರ ಬದಲಾವಣೆ ಸೇರಿ ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆಯಡಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ವಿಶೇಷ ಅಭಿಯಾನದಲ್ಲಿ ಪಂಚ ಗ್ಯಾರಂಟಿಗಳ ಯೋಜನೆ ವಂಚಿತ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿರುವುದು ಸಂತಸ ತಂದಿದ್ದು, ತಾಲೂಕಿನಲ್ಲಿ 100ಕ್ಕೆ 100ರಷ್ಟು ಅರ್ಹ ಫಲಾನುಭವಿಗಳು ಪಂಚ ಗ್ಯಾರಂಟಿಯಿಂದ ದೂರ ಉಳಿಯಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗದಗ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಕೃಷ್ಣಗೌಡ ಎಚ್.ಪಾಟೀಲ, ಶಂಭು ಕಾಳೆ, ಮೀನಾಕ್ಷಿ ಬೆನಕಣ್ಣವರ, ಸಾವಿತ್ರಿ ಹೂಗಾರ, ದಯಾನಚಿದ ಪವಾರ, ಸಂಗಮೇಶ ಕೆರಕಲಮಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪೂರ, ಮಲ್ಲಪ್ಪ ದಂಡಿನ ಚಿಂಚಲಿ, ಗಣೇಶಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ, ಭಾಷಾಸಾಬ ಮಲ್ಲಸಮುದ್ರ, ತಾಲೂಕು ಸಮಿತಿ ಸದಸ್ಯ ಕಾರ್ಯದರ್ಶಿ, ಗದಗ ತಾ.ಪಂ ಇಒ ಮಲ್ಲಯ್ಯ ಕೊರವನವರ ಮುಂತಾದವರಿದ್ದರು.

ಸಚಿವ ಎಚ್.ಕೆ. ಪಾಟೀಲ ಮೆಚ್ಚುಗೆ

ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಗದಗ ತಾಲೂಕಿನಲ್ಲಿ ಈವರೆಗೂ ಪಂಚ ಗ್ಯಾರಂಟಿ ಯೋಜನೆಗಳ ಉಪಯೋಗ ಪಡೆಯದ ಫಲಾನುಭವಿಗಳಿಗೆ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಪಂಚ ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಸೇರದ 150ಕ್ಕೂ ಅಧಿಕ ಅರ್ಹ ಫಲಾನುಭವಿಗಳನ್ನು ಸೇರ್ಪಡೆಗೊಳಿಸಿರುವುದು ಮಾದರಿಯಾಗಿದ್ದು, ಇದೇ ಮಾದರಿಯಲ್ಲಿ ಗ್ರಾಮ, ಹೋಬಳಿ, ವಾರ್ಡ್ ಮಟ್ಟದಲ್ಲಿ ಅಭಿಯಾನ ಹಮ್ಮಿಕೊಂಡು ರಾಜ್ಯದಲ್ಲಿ 100ಕ್ಕೆ 100ರಷ್ಟು ಅರ್ಹ ಫಲಾನುಭವಿಗಳನ್ನು ಪಂಚ ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಸೇರಿಸಬಹುದಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅಭಿಯಾನದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ, ಬೆಂಬಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here