ಆರಂಭದ ದಿನವೇ ಕೆಲಸಕ್ಕೆ ಹಾಜರಾದ 1040 ಕಾರ್ಮಿಕರು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಕೂಲಿ ಕಾರ್ಮಿಕರಿಗೆ ಬೇಸಿಗೆಯ ಸಮಯದಲ್ಲಿ ಉದ್ಯೋಗ ನೀಡುವ ದೃಷ್ಟಿಯಿಂದ ಸರಕಾರ ನರೇಗಾ ಯೋಜನೆಯಡಿ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಲು 1.74 ಕೋಟಿ ರೂಗಳ ಕ್ರಿಯಾ ಯೋಜನೆಯ ಕಾಮಗಾರಿಯನ್ನು ಆರಂಭಿಸಿದ್ದು, ಕಾರ್ಮಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.

Advertisement

ಇಲ್ಲಿಯ ರೈತರ ಜಮೀನಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹಮ್ಮಿಕೊಂಡ ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಆರಂಭದ ವರ್ಷದಲ್ಲಿ 84 ರೂ ಇದ್ದ ಉದ್ಯೋಗ ಖಾತ್ರಿ ಕೂಲಿ ಮೊತ್ತ ಪ್ರಸ್ತುತ 370 ರೂವರೆಗೂ ಸರಕಾರ ನೀಡುತ್ತಿದ್ದು, ನಗರ ಪ್ರದೇಶಗಳಿಗೆ ಗುಳೆ ಹೋಗದೇ ಗ್ರಾಮದಲ್ಲಿಯೇ ರೈತರ ಜಮೀನಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ನರೇಗಾ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದರು.

ಅಭಿವೃದ್ಧಿ ಅಧಿಕಾರಿ ಅಮೀರ ನಾಯಕ ಮಾತನಾಡಿ, ರೈತರ ಜಮೀನುಗಳಲ್ಲಿ ನರೇಗಾ ಕಾಮಗಾರಿ ಆರಂಭವಾಗಿದ್ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಉದ್ಯೋಗ ಖಾತ್ರಿಯಿಂದ ದುಡಿಯುವ ಕೈಗಳಿಗೆ ಕೆಲಸ ನೀಡಿದ ತೃಪ್ತಿ ಗ್ರಾಮ ಪಂಚಾಯಿತಿಗೆ ತಂದಿದೆ. ಆರಂಭದ ದಿನವೇ 1040 ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದು ಸಂತಸ ತಂದಿದ್ದು, ಗ್ರಾಮದ 8 ದಿಕ್ಕಿನಲ್ಲಿಯೂ ಏಕಕಾಲಕ್ಕೆ ಕೆಲಸ ಆರಂಭವಾಗಿದೆ. ಆದ್ದರಿಂದ ರೈತ ಬಂಧುಗಳು ಕೂಲಿ ಕಾರ್ಮಿಕರಿಗೆ ಸಹಕಾರ ನೀಡಿ ನರೇಗಾ ಯೋಜನೆಗೆ ಪ್ರೋತ್ಸಾಹ ನೀಡಬೇಕು. ಕಾಯಕ ಬಂಧುಗಳು ನರೇಗಾ ಯೋಜನೆಯ ನಿಯಮ ಉಲ್ಲಂಘನೆಯಾದಂತೆ ನಿಗಾ ವಹಿಸಬೇಕು ಎಂದರು.

ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾ.ಪಂ ಸದಸ್ಯರಾದ ಬಸವರಾಜ ಹಟ್ಟಿ, ಲಕ್ಷö್ಮಣ ಗುಡಸಲಮನಿ, ಕುಬೇರಪ್ಪ ಬೆಂತೂರ, ವಿರುಪಾಕ್ಷಿ ಬೆಟಗೇರಿ, ಹನುಮಂತಪ್ಪ ಬಂಗಾರಿ, ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ವೀರೇಶ ಪಟ್ಟಣಶೆಟ್ಟಿ, ಯೋಜನೆಯ ತಾಂತ್ರಿಕ ಅಭಿಯಂತರ ಅಜಯ, ಗ್ರಾಮ ಕಾಯಕ ಮಿತ್ರ ಅಕ್ಕಮ್ಮ ವಡ್ಡರ, ಶೇಖಪ್ಪ ಸೋಮನಕಟ್ಟಿ ಹಾಜರಿದ್ದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ತಾ.ಪಂ ಸಹಾಯಕ ನಿರ್ದೇಶಕ ಕುಮಾರ ಪೂಜಾರ ಮಾತನಾಡಿ, ತಂತ್ರಾಂಶದಲ್ಲಿ ಎನ್.ಎಂ.ಎಂ.ಎಸ್ ಹಾಜರಾತಿ ಕಡ್ಡಾಯವಾಗಿದ್ದು, ಕೆಲಸದ ಆರಂಭದಲ್ಲಿ ಮತ್ತು ಮುಕ್ತಾಯದ ಹಂತದಲ್ಲಿ ಹಾಜರಾತಿಯನ್ನು ತಂತ್ರಾAಶದಲ್ಲಿ ಅಳವಡಿಸಬೇಕು. ಇದರಿಂದ ಕಾರ್ಮಿಕರ ಖಾತೆಗೆ ಹಣ ಜಮೆ ಆಗುತ್ತದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here