ವಿಜಯಸಾಕ್ಷಿ ಸುದ್ದಿ, ಗದಗ: ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಜನಸಾಮಾನ್ಯರಿಂದ ಅಹವಾಲುಗಳ ಮಹಾಪೂರವೇ ಹರಿದು ಬಂದಿದೆ. ಸಾರ್ವಜನಿಕರಿಂದ 767 ಅಹವಾಲುಗಳು ನೇರವಾಗಿ ದಾಖಲಾಗಿವೆ, 300 ಆನ್ಲೈನ್ ಮೂಲಕ ಅರ್ಜಿಗಳು ಬಂದಿದ್ದು, ಒಟ್ಟು 1067 ವಿವಿಧ ರೀತಿಯ ಅಹವಾಲುಗಳು ಜನತಾ ದರ್ಶನದಲ್ಲಿ ಸ್ವೀಕೃತವಾಗಿವೆ.
ಇವುಗಳಲ್ಲಿ 900 ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದೆ. 150 ಅಹವಾಲುಗಳನ್ನು ವಿವರವಾಗಿ ಪರಿಶೀಲನೆ ನಡೆಸಲಾಗಿದೆ. ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಶಾಂತಿ, ಶಿಸ್ತಿನಿಂದ ಜರುಗಿದ್ದು, ಇದಕ್ಕೆ ಡಿಸಿ ಸಿ.ಎನ್. ಶ್ರೀಧರ, ಎಸ್ಪಿ ರೋಹನ್ ಜಗದೀಶ್, ಡಿಸಿಎಫ್ ಸಂತೋಷ ಕುಮಾರ ಸೇರಿದಂತೆ ಎಲ್ಲ ಅಧಿಕಾರಿಗಳು ಕಾರಣರಾಗಿದ್ದಾರೆ, ಎಲ್ಲರಿಗೂ ಅಭಿನಂದನೆಗಳು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಡಾ. ವೆಂಕಟೇಶ ಆಲ್ಕೊಡ್ ತಂಡದ ಪ್ರಾರ್ಥನೆ, ನಾಡಗೀತೆಯೊಂದಿಗೆ ಆರಂಭವಾದ ಜನತಾ ದರ್ಶನ ಅಂತಿಮವಾಗಿ ಪೊಲೀಸ್ ಬ್ಯಾಂಡ್ನ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.



