ವಿಜಯಸಾಕ್ಷಿ ಸುದ್ದಿ, ಗದಗ: ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ 72ನೇ ಜನ್ಮದಿನಾಚರಣೆಯ ನಿಮಿತ್ತ 1072 ಜನರಿಂದ ಅಂಗಾಂಗ ದಾನ ಪ್ರತಿಜ್ಞೆ ಪತ್ರಗಳನ್ನು ಸಂಗ್ರಹಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ ಮಾಹಿತಿ ನೀಡಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಚ್.ಕೆ. ಪಾಟೀಲ ಸೇವಾ ತಂಡವು ಎಚ್.ಕೆ. ಪಾಟೀಲರ 72ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದೊಂದಿಗೆ ಈ ಅಭಿಯಾನ ನಡೆಸುತ್ತಿದೆ ಎಂದರು.
ಈ ಅಭಿಯಾನವು ಸೇವಾ ತಂಡದ ಅತ್ಯಂತ ಶ್ರೇಷ್ಠ ಕೆಲಸಗಳಲ್ಲಿ ಒಂದಾಗಿದೆ. ಅಂಗಾಂಗ ದಾನಕ್ಕೆ ಯಾವುದೇ ರೀತಿಯ ಒತ್ತಾಯವಿಲ್ಲ. ಯಾರಾದರು ಪ್ರತಿಜ್ಞೆ ಮಾಡಿದರೂ, ಕುಟುಂಬದವರ ಒಪ್ಪಿಗೆ ಇಲ್ಲದೆ ಅಂಗಾಂಗಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು, ನೋಂದಣಿ ಇಲ್ಲದೆ ಸೇವೆ ಮಾಡುತ್ತಿದ್ದ ಎಚ್.ಕೆ. ಪಾಟೀಲ ಸೇವಾ ತಂಡ ಈಗ ಅಧಿಕೃತವಾಗಿ ನೋಂದಣಿಯಾಗಿದ್ದು, ಸಾಮಾಜಿಕ ಸೇವೆಗಳನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಪ್ಯಾರ ಅಲಿ ನೂರಾನಿ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಬಸವರಾಜ ಕಡೇಮನಿ, ವಿನೋದ ಶಿದ್ಲಿಂಗ್, ರಮೇಶ ಹೊನ್ನಿನಾಯ್ಕರ, ಎಂ.ಸಿ. ಶೇಖ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಡಾ. ಎಸ್.ಆರ್. ನಾಗನೂರ ಮಾತನಾಡಿ, 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಂತಹ ದೇಶದಲ್ಲಿ ಕೇವಲ 3 ಲಕ್ಷ ಜನರು ಮಾತ್ರ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಕುರಿತು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಸಹ ಅಂಗಾಂಗ ದಾನದ ಪ್ರಮಾಣದಲ್ಲಿ ನಿರೀಕ್ಷಿತ ಏರಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎಚ್.ಕೆ. ಪಾಟೀಲರ ಜನ್ಮದಿನಾಚರಣೆಯ ಸಂದರ್ಭವನ್ನು ಬಳಸಿಕೊಂಡು ಸಾವಿರಕ್ಕೂ ಹೆಚ್ಚು ಜನರಿಂದ ಪ್ರತಿಜ್ಞಾ ಪತ್ರಗಳನ್ನು ಸಂಗ್ರಹಿಸಿ, ಸಮಾಜದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶವಿದೆ ಎಂದು ಹೇಳಿದರು.



