ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ : ದಿವ್ಯ ಪ್ರಭು

0
109th birth anniversary of D. Devaraj Arasu
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ದೇವರಾಜ ಅರಸು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ಬಡವರ, ಹಿಂದುಳಿದವರ ಪರವಾಗಿ ನಿಂತು ಸಾಮಾಜಿಕ ಮತ್ತು ಮೂಲಭೂತ ಅವಶ್ಯಕತೆಗಳನ್ನು ಒದಗಿಸಿದವರು. ಇವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಲಕ್ಷಾಂತರ ವಿದ್ಯಾರ್ಥಿ ವಸತಿ ನಿಲಯಗಳನ್ನು ಕಟ್ಟಿಸಿ, ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತಿದ ಇವರು ತಮ್ಮ ಆಧಿಕಾರದ ಸಂದರ್ಭದಲ್ಲಿ ಸಮಾಜದಲ್ಲಿದ್ದ ಎಲ್ಲ ವರ್ಗದವರ ಪರವಾಗಿ ಶ್ರಮಿಸಿದರು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅಭಿಪ್ರಾಯಪಟ್ಟರು.

Advertisement

ಅವರು ಮಂಗಳವಾರ ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ಡಿ. ದೇವರಾಜು ಅರಸು ಅವರ 109ನೇ ಜನ್ಮ ದಿನಾಚರಣೆಯ ಅಂಗವಾಗಿ ಡಿ. ದೇವರಾಜು ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಿ.ದೇವರಾಜು ಅರಸು ಪ್ರಶಸ್ತಿ ಪುರಸ್ಕೃತ ಶಶಿಧರ ತೋಡಕರ ಮಾತನಾಡಿ, ಸಾಮಾಜಿಕ ಬದಲಾವಣೆ, ಬಡತನ ನಿರ್ಮೂಲನೆ, ಮನೆಗಳ ನಿರ್ಮಾಣದಲ್ಲಿ ಅದ್ವಿತೀಯ ಕೆಲಸ ಮಾಡಿದ್ದಾರೆ.

ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ದೇವರಾಜು ಅರಸು ಅವರ ಮಾರ್ಗದಲ್ಲಿ ನಡೆಯಬೇಕು. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಬುನಾದಿ ಹಾಕಿದ ಕೀರ್ತಿ ಅರಸು ಅವರದು. 70-80ರ ದಶಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾದ ನ್ಯಾಯ ಪ್ರತೀಕನೆಂಬ ಖ್ಯಾತಿಗೂ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ಎಸ್ ಡಿ.ದೇವರಾಜು ಅರಸು ಅವರ ಶೈಕ್ಷಣಿಕ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಡಿ. ದೇವರಾಜು ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕುಶಾಲ್, ನಾಮ ನಿರ್ದೇಶಿತ ಸದಸ್ಯ ಗುರುನಾಥ ಹುಲಗಾರ, ಅಲೆಮಾರಿ ಸಮುದಾಯದ ಮುಖಂಡ ರಾಜು ವೇಲಕರ, ಈಶ್ವರ ಬೆಳ್ಳಿಗಟ್ಟಿ ಇದ್ದರು.

ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಗೋಪಾಲ ಲಮಾಣಿ ಅಥಿತಿಗಳ ಪರಿಚಯ ಮಾಡಿದರು. ರವಿ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರೆ, ಗೀತಾ ಹೂಗಾರ ವಂದಿಸಿದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ವಸತಿ ನೀಲಯದ ನಿಲಯ ಪಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸಮಾಜದಲ್ಲಿ ದೇವರಾಜು ಅರಸು ಅವರಂತಹ ವ್ಯಕ್ತಿಗಳು ಇದ್ದಾಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ. ದೇವರಾಜು ಅರಸು ಅವರು ಕ್ರಾಂತಿಕಾರಿ ಹೋರಾಟಗಾರರಾಗಿದ್ದರು. ನಾವು ಮಾಡುತ್ತಿರುವ ಕಾಯಕದ ಬಗ್ಗೆ ಕೀಳರಿಮೆ ಪಡಬಾರದು. ದೇವರಾಜು ಅರಸು ಅವರ ಪ್ರತಿಯೊಂದು ತತ್ವ, ಆದರ್ಶಗಳನ್ನು ಪಾಲಿಸೋಣ. ಅವರ ಕೆಲವೊಂದು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.
– ದಿವ್ಯ ಪ್ರಭು.
ಜಿಲ್ಲಾಧಿಕಾರಿಗಳು, ಧಾರವಾಡ.

 


Spread the love

LEAVE A REPLY

Please enter your comment!
Please enter your name here