ಸುವಿಧಾ ಸಂಘ ಪ್ರಗತಿಯಲ್ಲಿ ಮುನ್ನಡೆ : ಬಿ.ವ್ಹಿ. ಸಂಕನೂರ

0
10th Annual Meeting of Suvidha Patna Friendly Cooperative Society
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸುವಿಧಾ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 5 ಲಕ್ಷ 29 ಸಾವಿರ ರೂ.ಗಳ ಲಾಭದೊಂದಿಗೆ ಪ್ರಗತಿಯಲ್ಲಿ ಮುನ್ನಡೆದಿದ್ದು, ಶೇರುದಾರರಿಗೆ ಶೇ. 10ರಷ್ಟು ಡಿವ್ಹಿಡೆಂಡ್ ವಿತರಿಸಲಾಗುವದು ಎಂದು ಸಂಘದ ಅಧ್ಯಕ್ಷ ಬಿ.ವ್ಹಿ. ಸಂಕನೂರ ಹೇಳಿದರು.
ಅವರು ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಘದ 10ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘಕ್ಕೆ 906 ಸದಸ್ಯರಿದ್ದು, ಗ್ರಾಹಕರು ಸಂಘದಲ್ಲಿ ವಿಶ್ವಾಸದೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ. ಶೇರು, ಡಿಪಾಸಿಟ್ ಹಾಗೂ ಇತರೆ ಹಣಕಾಸು ವ್ಯವಹರಿಸುತ್ತ ಸಂಘದ ಆರ್ಥಿಕ ಪ್ರಗತಿಗೆ ಸಹಕಾರ ನೀಡುತ್ತಿದ್ದಾರೆ. ಎಲ್ಲ ನಿರ್ದೆಶಕರು ಮಾರ್ಗದರ್ಶನ ನೀಡಿ ಸರಿಯಾಗಿ ಮರುಪಾವತಿ ಮಾಡುವವರಿಗೆ ಸಾಲ ಕೊಡಿಸಲು ಹಾಗೂ ಸಾಲ ವಸೂಲಾತಿಗೆ ಸಹಕರಿಸುತ್ತಿದ್ದಾರೆ ಎಂದರು.
ಬರಲಿರುವ ದಿನಗಳಲ್ಲಿ ಸದಸ್ಯರ ಸಂಖ್ಯೆ ಹಾಗೂ ಎಫ್.ಡಿ. ಹೆಚ್ಚಿಸಿ ಸಂಘದ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಆರ್ಥಿಕ ಬಲವರ್ಧನೆಗೆ ಅಗತ್ಯ ಕ್ರಮ ಜರುಗಿಸಲಾಗುವದು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಶಾಂತಯ್ಯ ಮುತ್ತಿನಪೆಂಡಿಮಠ ಮಾತನಾಡಿ, ಕಣಗಿನಹಾಳದ ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಅವರು ಸಹಕಾರಿ ಪಿತಾಮಹ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ದೇಶದಲ್ಲಿಯೇ ಪ್ರಪ್ರಥಮ ಸಹಕಾರಿ ಸಂಘ ಕಣಗಿನಹಾಳದಲ್ಲಿ ಸ್ಥಾಪನೆಗೊಂಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಇಂತಹ ಸಹಕಾರಿ ಪರಿಸರದಲ್ಲಿ ಸಹಕಾರಿ ಸಂಘಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಗ್ರಾಹಕರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಬಲಗೊಳ್ಳಲು ಸಹಕರಿಸಲಿ ಎಂದರು.
ಸಹಕಾರಿ ರಂಗದ ಭೀಷ್ಮ, ಸಹಕಾರಿ ಕ್ಷೇತ್ರದ ಪಿತಾಮಹ ಎಂದೇ ಖ್ಯಾತರಾಗಿರುವ ಸಿದ್ಧನಗೌಡ ಪಾಟೀಲರ ಪುತ್ಥಳಿಯನ್ನು ಗದುಗಿನ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಲು ಜಿಲ್ಲಾಡಳಿತ, ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಇದಕ್ಕೆ ಗದಗ ಜಿಲ್ಲೆಯ ಎಲ್ಲ ಸಹಕಾರಿ ಸಂಘ ಸಂಸ್ಥೆಗಳು ಒತ್ತಾಯ ಮಾಡಬೇಕೆಂದು ಹೇಳಿ ಸುವಿಧಾ ಸಂಘದ ಪ್ರಗತಿಯನ್ನು ಶ್ಲಾಘಿಸಿದರು.
ಸಹಕಾರ ಸಂಘದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಗ್ರಾಹಕರನ್ನು ಗೌರವಿಸಲಾಯಿತು. ಮುಖ್ಯ ಕಾರ್ಯನಿರ್ವಾಹಕ ರವಿ ಹೊಸೂರ ಅವರು ಅಡಾವೆ ಪತ್ರಿಯನ್ನು ಸಾದರಪಡಿಸಿದರು. ವೇದಿಕೆಯ ಮೇಲೆ ಗಣ್ಯರಾದ ಹಿರೇಮಠ, ನಿರ್ದೆಶಕರಾದ ಡಿ.ಕೆ. ಅಬ್ಬಿಗೇರಿ, ಶಾಂತಾ ಸಂಕನೂರ, ಎಸ್.ಎಸ್. ಯಳವತ್ತಿ, ಪದ್ಮಾವತಿ ಜಾಡರ, ರೇಖಾ ಆಸಂಗಿ, ಕೆ.ನಿಖಿಲ್‌ರಡ್ಡಿ ಉಪಸ್ಥಿತರಿದ್ದರು.
ಪದ್ಮಾವತಿ ಜಾಡರ ಪ್ರಾರ್ಥಿಸಿದರು, ಎಂ.ವೈ. ಹೊಸೂರ ಸ್ವಾಗತಿಸಿದರು. ಅಶೋಕ ಅಂಗಡಿ ನಿರೂಪಿಸಿದರು. ನಿರ್ಮಲಾ ವಂದಿಸಿದರು. ಸಭೆಯಲ್ಲಿ ಶಿವಪ್ಪ ಗೋಣೆಪ್ಪನವರ, ಉಮೇಶ ತಿಮ್ಮನಗೌಡ್ರ, ಮೈಲಾರಪ್ಪ, ಸೋಮಗೊಂಡ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಸಲಹೆ-ಸೂಚನೆ ನೀಡಿದರು.
ಸಂಘದ ಉಪಾಧ್ಯಕ್ಷ ರಾಮಪ್ಪ ಅಗಸಿಮನಿ ಸಂಘ ನಡೆದು ಬಂದ ದಾರಿ, ಪ್ರಸ್ತುತ ಪ್ರಗತಿಯನ್ನು ವಿವರಿಸಿ ವರದಿ ವರ್ಷದ ಅಂತ್ಯಕ್ಕೆ ನಮ್ಮ ಸಂಘದ ದುಡಿಯುವ ಬಂಡವಾಳ, ಶೇರು, ಠೇವು, ನಿಧಿಗಳು ಒಟ್ಟು 9 ಕೋಟಿ, 75 ಲಕ್ಷ, 37 ಸಾವಿರ ರೂ.ಗಳಷ್ಟು ದುಡಿಯುವ ಬಂಡವಾಳವನ್ನು ಹೆಚ್ಚಿಸಲಾಗಿದೆ. ಇದಕ್ಕೆಲ್ಲ ಗ್ರಾಹಕರು ನೀಡಿದ ಸಹಕಾರವೇ ಕಾರಣ ಎಂದರು.

Spread the love
Advertisement

LEAVE A REPLY

Please enter your comment!
Please enter your name here