ಲೋಕ ಅದಾಲತ್‌ನಲ್ಲಿ ಒಂದಾದ 16 ದಂಪತಿಗಳು

0
lok adalat
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯ ನವದೆಹಲಿ, ಗೌರವಾನ್ವಿತ ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಗದಗ ಜಿಲ್ಲೆಯಲ್ಲಿ ಮಾ. 16ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 15 ಬೆಂಚ್‌ಗಳನ್ನು ರಚಿಸಿ ರಾಜೀ ಸಂಧಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರಲ್ಲಿ 2,033 ಚಾಲ್ತಿ ಪ್ರಕರಣಗಳನ್ನು ಹಾಗೂ 21,387 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 23,420 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಇತ್ಯರ್ಥಗೊಂಡ ಪ್ರಕರಣಗಳಲ್ಲಿ 8 ಮೋಟಾರು ವಾಹನ ಅಪಘಾತ ಪ್ರಕರಣಗಳು, 105 ಚೆಕ್ ಬೌನ್ಸ್ ಪ್ರಕರಣಗಳು, 40 ಕ್ರಿಮಿನಲ್ ಕಂಪೌಂಡೇಬಲ್ ಪ್ರಕರಣಗಳು, 307 ಅಸಲುದಾವೆ ಪ್ರಕರಣಗಳು, 374 ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು, 24 ವೈವಾಹಿಕ ಪ್ರಕರಣಗಳು, 37 ವಿದ್ಯುಚ್ಛಕ್ತಿ ಪ್ರಕರಣಗಳು ಸೇರಿದಂತೆ ಒಟ್ಟು 2,033 ಚಾಲ್ತಿ ಪ್ರಕರಣಗಳನ್ನು ಒಟ್ಟು ರೂ.48,13,61,553ಗಳ ಪರಿಹಾರ ಒದಗಿಸಿ, ರಾಜೀ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ವ್ಯಾಜ್ಯಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿದ ಬ್ಯಾಂಕ್ ಪ್ರಕರಣಗಳು, ಬಿಎಸ್‌ಎನ್‌ಎಲ್, ಕಂದಾಯ ಅದಾಲತ್ ಪ್ರಕರಣಗಳು ಸೇರಿದಂತೆ ಒಟ್ಟು 21,387 ವ್ಯಾಜ್ಯಪೂರ್ವ ಪ್ರಕರಣಗಳನ್ನು ರೂ.5,27,49,628ಗಳಿಗೆ ರಾಜೀ ಸಂಧಾನ ಮಾಡಲಾಗಿದೆ.
ಗದಗದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರ ಎಸ್.ಶೆಟ್ಟಿ, 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಖಾದರಸಾಬ ಎಚ್.ಬೆನಕಟ್ಟಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಪ್ರೀತಿ ಸದ್ಗುರು ಸದರಜೋಶಿ, ಅಪರ ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ ಸಿ.ಕುರುಬೆಟ್, ಪ್ರಧಾನ ದಿವಾಣಿ ನ್ಯಾಯಾಧೀಶ ಅರುಣ ಚೌಗಲೆ, ಜೆಎಂಎಫ್‌ಸಿ 1ನೇ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾ ಜೋಗೋಜಿ, ಜೆಎಂಎಫ್‌ಸಿ 2ನೇ ನ್ಯಾಯಾಲಯದ ನ್ಯಾಯಾಧೀಶ ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ, ಉಪಾಧ್ಯಕ್ಷ ಎ.ಎಂ. ಹದ್ಲಿ, ಪ್ರಧಾನ ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ, ಜಂಟಿ ಕಾರ್ಯದರ್ಶಿ ಪಿ.ಬಿ. ಕಣಗಿನಹಾಳ, ಖಜಾಂಚಿ ವಿ.ಎಚ್. ಮೇರವಾಡೆ,  ಸರ್ಕಾರಿ ಅಭಿಯೋಜಕರಾದ ಸವಿತಾ ಎಂ.ಶಿಗ್ಲಿ, ಜಿಲ್ಲಾ ಸರ್ಕಾರಿ ವಕೀಲರಾದ ಎಂ.ಎಂ. ಕುಕನೂರ, ಅಪರ ಜಿಲ್ಲಾ ಸರ್ಕಾರಿ ವಕೀಲರಾದ ಜಿ.ಬಿ. ನೀಲರಡ್ಡಿ ಹಾಗೂ ವಕೀಲ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಹಾಗೂ ಎಲ್ಲಾ ನ್ಯಾಯಾಲಯಗಳ ಸಿಬ್ಬಂದಿವರ್ಗ ಉಪಸ್ಥಿತರಿದ್ದ ಲೋಕ ಅದಾಲತ್ ಯಶಸ್ವಿಗೊಳಿಸಿದರು. ಎಲ್ಲಾ ತಾಲೂಕುಗಳ ನ್ಯಾಯಾಧೀಶರು ಹಾಗೂ ವಕೀಲ ವೃಂದದವರು, ಸಿಬ್ಬಂದಿವರ್ಗ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಗಣಿ ಮತ್ತು ಭೂ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಕೂಡಾ ಆಯಾ ತಾಲೂಕಾ ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌ನಲ್ಲಿ ಪಾಲ್ಗೊಂಡು ರಾಜೀ ಸಂಧಾನ ಯಶಸ್ವಿಗೊಳಿಸಿದರು.
ರಾಷ್ಟ್ರೀಯ ಲೋಕ ಅದಾಲತ್‌ಗೆ ಸಹಕಾರ ನೀಡಿದ ವಕೀಲ ವೃಂದದವರಿಗೆ, ಪಕ್ಷಗಾರರಿಗೆ, ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ, ಸಿಬ್ಬಂದಿ ವರ್ಗದವರಿಗೆ, ಜಿಲ್ಲಾ ನ್ಯಾಯಾಲಯದ ತಾಂತ್ರಿಕ ಸಿಬ್ಬಂದಿ ವರ್ಗದವರಿಗೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಸರ್ಕಾರಿ ವಕೀಲರಿಗೆ, ಅಪರ ಜಿಲ್ಲಾ ಸರ್ಕಾರಿ ವಕೀಲರಿಗೆ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅದs್ಯಕ್ಷರು ಹಾಗೂ ಸದಸ್ಯರುಗಳಿಗೆ, ಅಭಿಯೋಜನಾ ಇಲಾಖೆ, ಕಾರ್ಮಿಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ, ವಿಮೆ ಕಂಪನಿಯವರಿಗೆ, ಉಪ ವಿಭಾಗಾಧಿಕಾರಿಗಳಿಗೆ, ಅಬಕಾರಿ ಇಲಾಖೆ, ನಗರಸಭೆ, ಕೆ.ಎಸ್.ಆರ್.ಟಿ.ಸಿ, ಬ್ಯಾಂಕ್, ವಾರ್ತಾ ಇಲಾಖೆಯವರಿಗೆ ಹಾಗೂ ಎಲ್ಲಾ ಮಾಧ್ಯಮದವರಿಗೆ, ಲೋಕ ಅದಾಲತ್‌ಗೆ ಸಹಕಾರ ನೀಡಿದ ಎಲ್ಲರಿಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ವಿಶೇಷವಾಗಿ ಗದುಗಿನ ಪ್ರಧಾನ  ಕೌಟುಂಬಿಕ ನ್ಯಾಯಾಲಯದಲ್ಲಿ ಹಾಗೂ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ 9 ಪ್ರಕರಣಗಳಲ್ಲಿ ದಂಪತಿಗಳನ್ನು ಪುನಃ ಒಂದುಗೂಡಿಸಲಾಯಿತು. ರೋಣ ನ್ಯಾಯಾಲಯದಲ್ಲಿ 3 ಜೋಡಿ, ಲಕ್ಷ್ಮೇಶ್ವರ ನ್ಯಾಯಾಲಯದಲ್ಲಿ 2 ಜೋಡಿ, ಮುಂಡರಗಿ ನ್ಯಾಯಾಲಯದಲ್ಲಿ 2 ಜೋಡಿ ದಂಪತಿಗಳನ್ನು ಪುನಃ ಒಂದುಗೂಡಿಸಿ ಕಳುಹಿಸಿಕೊಡಲಾಯಿತು. ಒಟ್ಟು 16 ಜೋಡಿದಂಪತಿಗಳು ಈ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪುನಃ ಒಂದುಗೂಡಿದ್ದು ವಿಶೇಷವಾಗಿದೆ.

Spread the love
Advertisement

LEAVE A REPLY

Please enter your comment!
Please enter your name here