ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ಬಹುತೇಕ ಪೂರ್ಣಗೊಳಿಸಿದ್ದಾರೆ. ಮಾರ್ಚ್ 6ರಂದು ಅವರು ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಅತಿಹೆಚ್ಚು ಬಜೆಟ್ ಮಂಡಿಸಿರುವ ನಾಯಕ ಎಂಬ ದಾಖಲೆ ಅವರ ಹೆಸರಿನಲ್ಲಿದೆ.
ಎಚ್.ಡಿ. ದೇವೇಗೌಡ ಹಾಗೂ ಜೆ.ಹೆಚ್. ಪಟೇಲ್ ಆಡಳಿತ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು 1995-96ನೇ ಸಾಲಿನ ಮೊದಲ ಮುಂಗಡ ಪತ್ರ ಮಂಡಿಸಿದ್ದರು. ನಂತರ 1996-97ರಿಂದ 1999-2000ರವರೆಗೆ ಹಾಗೂ 2004-05, 2005-06 ಸಾಲುಗಳಲ್ಲಿ ಬಜೆಟ್ ಮಂಡಿಸಿದ್ದರು.
ಬಳಿಕ ಮುಖ್ಯಮಂತ್ರಿಯಾಗಿ 2013-14ರಿಂದ 2018-19ರವರೆಗೆ ನಿರಂತರವಾಗಿ ಬಜೆಟ್ ಮಂಡಿಸಿದ ಅವರು, ಪ್ರಸ್ತುತ ಅವಧಿಯಲ್ಲಿ 2023-24, 2024-25 ಹಾಗೂ 2025-26 ಸಾಲಿನ ಬಜೆಟ್‌ಗಳನ್ನು ಮಂಡಿಸಿದ್ದಾರೆ. 2023-24ರಲ್ಲಿ ಬಜೆಟ್ ಮಂಡಿಸುವ ಮೂಲಕ ಅವರು ರಾಮಕೃಷ್ಣ ಹೆಗಡೆ ಅವರ ಅತಿಹೆಚ್ಚು ಬಜೆಟ್ ಮಂಡನೆ ದಾಖಲೆಯನ್ನು ಮೀರಿಸಿದ್ದರು.
ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಒಟ್ಟು 7 ಬಜೆಟ್ ಹಾಗೂ ಮುಖ್ಯಮಂತ್ರಿಯಾಗಿ 9 ಬಜೆಟ್ ಮಂಡಿಸಿದ್ದು, ಈಗ 17ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ತಮ್ಮ ಹಿಂದಿನ 16 ಬಜೆಟ್‌ಗಳಲ್ಲಿ ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಗಮನಾರ್ಹ.
ಪ್ರಸ್ತುತ ಅಧಿಕಾರಾವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಪ್ರಮುಖವಾಗಿದ್ದು, 2023-24 ಸಾಲಿನ ಬಜೆಟ್‌ನಲ್ಲಿ ₹35,410 ಕೋಟಿ, 2024-25ರಲ್ಲಿ ₹52,009 ಕೋಟಿ ಹಾಗೂ 2025-26ರಲ್ಲಿ ₹51,034 ಕೋಟಿ ಸೇರಿ ಸುಮಾರು ₹1.38 ಲಕ್ಷ ಕೋಟಿ ಅನುದಾನವನ್ನು ಮೀಸಲಿಟ್ಟಿದ್ದಾರೆ.
ಹಿಂದಿನ ಬಜೆಟ್‌ಗಳಲ್ಲಿ ಅನ್ನಭಾಗ್ಯ ಯೋಜನೆಗೆ ವಾರ್ಷಿಕ ₹4,300 ಕೋಟಿ ವೆಚ್ಚ, ವಿದ್ಯಾರ್ಥಿಗಳಿಗಾಗಿ ವಿದ್ಯಾಸಿರಿ, ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ, ಅಲ್ಪಸಂಖ್ಯಾತ ಯುವತಿಯರಿಗಾಗಿ ಶಾದಿ ಭಾಗ್ಯ, ಕೃಷಿ ಹೊಂಡ, ನಮ್ಮ ಗ್ರಾಮ ನಮ್ಮ ರಸ್ತೆ, ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಜಾರಿ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದರು.
ಇದೀಗ ಮಾ.6ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಯಾವ ಹೊಸ ಯೋಜನೆಗಳು ಘೋಷಣೆಯಾಗುತ್ತವೆ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.



