ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ 3 ವರ್ಷಗಳ ಹಿಂದೆ ರಾಜ್ಯದ ಪದವಿ ಕಾಲೇಜುಗಳಿಗೆ 1200 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಗದಗ ಜಿಲ್ಲೆಯಿಂದ 18 ಅಭ್ಯರ್ಥಿಗಳು ಸರ್ಕಾರದಿಂದ ನೇಮಕಾತಿ ಆದೇಶ ಪತ್ರ ಪಡೆದದ್ದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಂಕನೂರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ನೇಮಕಗೊಂಡ ಸಹಾಯಕ ಪ್ರಾಧ್ಯಾಪಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕಳೆದ ಬಾರಿ ಬಿಜೆಪಿ ಸರ್ಕಾರ ಇದ್ದಾಗ ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ತುಂಬಿಕೊಳ್ಳಲು ಆದೇಶ ಮಾಡಿ ಪರೀಕ್ಷೆ ನಡೆಸಿದ್ದರು. ಪರೀಕ್ಷೆಗೆ ಒಟ್ಟು 33 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದು, ಅದರಲ್ಲಿ ೧೨೦೦ ಅಭ್ಯರ್ಥಿಗಳ ಆಯ್ಕೆಯಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗಿಯಾದರೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದ್ದು ಅಭಿನಂದನಾರ್ಹ. ಅದರಲ್ಲಿ ಗದಗ ಜಿಲ್ಲೆಯಿಂದ18 ಜನ ಸಹಾಯಕ ಪ್ರಾಧ್ಯಾಪಕರಾಗಿದ್ದು ಗದಗ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಕಾಲೇಜುಗಳ ನಿವೃತ್ತ ಪ್ರಾಚಾರ್ಯರಾದ ಎಸ್.ಎಫ್. ಸಿದ್ನೆಕೊಪ್ಪ, ಉಮೇಶ ಅರಹುಣಸಿ, ಹಾಗೂ ಎಸ್.ಎಲ್. ಗುಳೇದಗುಡ್ಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೂತನವಾಗಿ ಆಯ್ಕೆಯಾದ ಸಹಾಯಕ ಪ್ರಾಧ್ಯಾಪಕರಿಗೆ ಶುಭ ಹಾರೈಸಿ ಅನುಭವದ ನುಡಿಗಳ ಮೂಲಕ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ಸೋಮಣ್ಣವರ, ಪ್ರಾಚಾರ್ಯರಾದ ಕೆ.ಆರ್. ಬೆಲ್ಲದ, ವಾಯ್.ಆರ್. ಬೇಲೇರಿ, ರವಿ ಕುಲಕರ್ಣಿ, ಉಪನ್ಯಾಸಕರಾದ ವಿ.ಎಸ್. ದಲಾಲಿ, ಶಶಿಧರ ಕುರಿ ಉಪಸ್ಥಿತರಿದ್ದರು. ಪ್ರಾಚಾರ್ಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಮ್.ಸಿ. ಕಟ್ಟಿಮನಿ ಕಾರ್ಯಕ್ರಮ ನಿರೂಪಣೆ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಎನ್.ವಿ. ಜೋಷಿ ವಂದಿಸಿದರು.