ಬೆಂಗಳೂರು: ಬೆಂಗಳೂರಿನಲ್ಲಿ ನಡೆದ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಮಾರತ್ ಹಳ್ಳಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಸ್ಪೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಈ ಕೃತ್ಯದ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿರುವ ನೇಪಾಳಿ ದಂಪತಿ ಕೈವಾಡವಿರುವುದು ಪತ್ತೆಯಾಗಿದೆ.
ಆರೋಪಿಗಳು ದಿನೇಶ್ ಹಾಗೂ ಕಮಲ ಎಂಬ ಹೆಸರಿನಲ್ಲಿ ಮನೆಕೆಲಸಕ್ಕೆ ಸೇರಿಕೊಂಡು ಕಳ್ಳತನ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ಮಾದರಿಯಲ್ಲಿ ಅವರು ಬೆಂಗಳೂರಿನಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಇದಲ್ಲದೆ, 2025ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲೂ ಈ ಜೋಡಿ ಕಳ್ಳತನ ನಡೆಸಿದ್ದ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದ ನಿವೃತ್ತ ಸರ್ಕಾರಿ ಅಧಿಕಾರಿಯ ಮನೆಯಲ್ಲಿ 16 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿನ ಕಳ್ಳತನದ ಕೇವಲ ಎರಡು ತಿಂಗಳೊಳಗೆ ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ನಡೆಸಿರುವುದು ತನಿಖೆಯಿಂದ ಬಹಿರಂಗವಾಗಿದೆ.
ಪುಣೆಯ ಭಾವ್ಧಾನ್ ನಗರದ ವಿಂಡ್ಮಿಲ್ ಸೊಸೈಟಿಯಲ್ಲಿರುವ ರತ್ನಾದೀಪ್ ರಂಗನಾಥ್ ರಾವ್ ಅವರ ಮನೆಯಲ್ಲಿ ದಿನೇಶ್ ಹಾಗೂ ಸಲೀನಾ ಎಂಬ ಹೆಸರಿನಲ್ಲಿ ಮನೆಕೆಲಸಕ್ಕೆ ಸೇರಿದ್ದ ಆರೋಪಿಗಳು, ಸುಮಾರು ಆರು ತಿಂಗಳ ಬಳಿಕ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮನೆಯವರು ಹೊರಗಿದ್ದ ಸಂದರ್ಭವನ್ನು ಬಳಸಿಕೊಂಡು ರೂಮಿನ ಲಾಕರ್ ಒಡೆದು ಚಿನ್ನಾಭರಣ ಕದ್ದಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಆರೋಪಿಗಳ ಪತ್ತೆಗೆ ಮಾರತ್ ಹಳ್ಳಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಸುಮಾರು ಏಳು ವಿಶೇಷ ತಂಡಗಳನ್ನು ರಚಿಸಲಾಗಿದೆ. ಮುಂಬೈ, ಕಲ್ಕತ್ತಾ, ನೇಪಾಳ ಸೇರಿದಂತೆ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ.
ಆರೋಪಿಗಳು ನೇಪಾಳಕ್ಕೆ ಪರಾರಿಯಾಗಿದ್ದರೆ ಅವರನ್ನು ಬಂಧಿಸುವುದು ಕಷ್ಟವಾಗಲಿದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ಜನರ ಗ್ಯಾಂಗ್ ಈ ಕಳ್ಳತನದ ಹಿಂದೆ ಇರುವ ಸಾಧ್ಯತೆ ಇದ್ದು, ಸ್ಥಳೀಯವಾಗಿ ಆರೋಪಿಗಳಿಗೆ ಯಾರಾದರೂ ಸಹಕಾರ ನೀಡಿದ್ದಾರೆಯೇ ಎಂಬುದರ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



