HomeDakshina Kannadaದುಶ್ಚಟಗಳ ವಿರುದ್ಧ 460 ಕಿ.ಮೀ. ಸೈಕಲ್ ಜಾಥಾ: 18ರ ಯುವಕನ ವಿಭಿನ್ನ ಜಾಗೃತಿ ಅಭಿಯಾನ

ದುಶ್ಚಟಗಳ ವಿರುದ್ಧ 460 ಕಿ.ಮೀ. ಸೈಕಲ್ ಜಾಥಾ: 18ರ ಯುವಕನ ವಿಭಿನ್ನ ಜಾಗೃತಿ ಅಭಿಯಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಕೈಯಲ್ಲಿ ಸೈಕಲ್, ಮನದಲ್ಲಿ ಸಮಾಜದ ಕಾಳಜಿ. ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವಕರು ಹಾಗೂ ಮಕ್ಕಳನ್ನು ಎಚ್ಚರಿಸುವ ಸಂಕಲ್ಪದೊಂದಿಗೆ 18 ವರ್ಷದ ಯುವಕನೊಬ್ಬ ಶಿರಸಿಯಿಂದ ಮಂತ್ರಾಲಯದವರೆಗೆ ಬರೋಬ್ಬರಿ 460 ಕಿ.ಮೀ. ಸೈಕಲ್ ಜಾಥಾ ಆರಂಭಿಸಿದ್ದಾನೆ. ಸೈಕಲ್‌ನ ಮುಂಭಾಗದಲ್ಲಿ ಮದ್ಯಪಾನ ಹಾಗೂ ಧೂಮಪಾನ ನಿಷೇಧದ ಫಲಕ, ಹಿಂಭಾಗದಲ್ಲಿ ಕನ್ನಡ ಧ್ವಜ ಕಟ್ಟಿಕೊಂಡು ಸಾಗುತ್ತಿರುವ ಶಿರಸಿಯ ಶಮಂತ ಕಮಲಾಕರಗೌಡ ಅವರ ವಿಭಿನ್ನ ಜಾಗೃತಿ ಅಭಿಯಾನ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಗುಟಕಾ, ಧೂಮಪಾನ ಸೇರಿದಂತೆ ವಿವಿಧ ದುಶ್ಚಟಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಶಾಲಾ ಮಕ್ಕಳು ಹಾಗೂ ಯುವಕರು ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆರಂಭದಲ್ಲಿ ಕುತೂಹಲ, ಸ್ನೇಹಿತರ ಒತ್ತಡ ಅಥವಾ ಅನುಕರಣೆಯಿಂದ ಆರಂಭವಾಗುವ ಚಟಗಳು ಕ್ರಮೇಣ ವ್ಯಸನವಾಗಿ, ಆರೋಗ್ಯದ ಜತೆಗೆ ಶಿಕ್ಷಣ, ಕುಟುಂಬ ಹಾಗೂ ಭವಿಷ್ಯದ ಮೇಲೂ ದುಷ್ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ಯುವಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಮಂತ ಅವರು ಶಿರಸಿಯಿಂದ ಮಂತ್ರಾಲಯದವರೆಗೆ ಸೈಕಲ್ ಜಾಗೃತಿ ಜಾಥಾ ಕೈಗೊಂಡಿದ್ದಾರೆ.

ದುಶ್ಚಟಗಳಿಂದ ದೂರವಿರುವಂತೆ ಯುವಕರಿಗೆ ಕೇವಲ ಉಪದೇಶ ಮಾಡುವ ಬದಲು ತಾವೇ ಸೈಕಲ್ ಏರಿ ನೂರಾರು ಕಿಲೋಮೀಟರ್ ಪ್ರಯಾಣಿಸಿ ಜಾಗೃತಿ ಮೂಡಿಸುವ ಮೂಲಕ ಶಮಂತ ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ. ಮಾರ್ಗಮಧ್ಯೆ ಸಿಗುವ ಯುವಕರು ಹಾಗೂ ಮಕ್ಕಳನ್ನು ಮಾತನಾಡಿಸಿ ಗುಟಕಾ, ಧೂಮಪಾನ ಮತ್ತು ಇತರ ವ್ಯಸನಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ.

ಶಮಂತ ಅವರು ಶ್ರೀಮಂತ ಕುಟುಂಬದವರಲ್ಲ. ಬಡತನದ ಕಾರಣದಿಂದ ಎಸ್‌ಎಸ್‌ಎಲ್‌ಸಿ ಬಳಿಕ ಶಿಕ್ಷಣ ಮೊಟಕುಗೊಳಿಸಿ ಸದ್ಯ ವಾಹನಗಳ ವಾಟರ್ ಸರ್ವಿಸ್ ಕೆಲಸ ಮಾಡುತ್ತಿದ್ದಾರೆ. ಆದರೆ, ಮಕ್ಕಳು ಹಾಗೂ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ಕಣ್ಣಾರೆ ಕಂಡ ಅವರು, ತಮ್ಮ ಕೈಲಾದ ರೀತಿಯಲ್ಲಿ ಸಮಾಜಕ್ಕೆ ಸಂದೇಶ ನೀಡಬೇಕು ಎಂಬ ಉದ್ದೇಶದಿಂದ ಈ ಸೈಕಲ್ ಜಾಥಾಕ್ಕೆ ಮುಂದಾಗಿದ್ದಾರೆ.

ಅ.5ರಂದು ಶಿರಸಿಯಿಂದ ಸೈಕಲ್ ಜಾಥಾ ಆರಂಭಿಸಿದ ಶಮಂತ, ಸುಡುಬಿಸಿಲಿನ ನಡುವೆಯೂ ಮೊದಲ ದಿನ ಸುಮಾರು 60ರಿಂದ 70 ಕಿ.ಮೀ. ಸೈಕಲ್ ತುಳಿದು ಯಲವಗಿ ಗ್ರಾಮ ತಲುಪಿ ರಾತ್ರಿ ವಿಶ್ರಾಂತಿ ಪಡೆದಿದ್ದಾರೆ. ಅ.6ರಂದು ಯಲವಗಿಯಿಂದ ಲಕ್ಷ್ಮೇಶ್ವರ ಮಾರ್ಗವಾಗಿ ಗದಗದತ್ತ ಸಾಗುವ ವೇಳೆ ಸ್ಥಳೀಯರು ಹಾಗೂ ರೈತರು ಅವರನ್ನು ಮಾತನಾಡಿಸಿ ಪ್ರೋತ್ಸಾಹಿಸಿ, ಸಹಾಯ ಮಾಡಿದ್ದಾರೆ. ಬಳಿಕ ಗದಗದಲ್ಲಿ ವಿಶ್ರಾಂತಿ ಪಡೆದು ಮಂತ್ರಾಲಯದತ್ತ ತಮ್ಮ ಜಾಗೃತಿ ಯಾತ್ರೆ ಮುಂದುವರಿಸಿದ್ದಾರೆ.

ಮಾರ್ಗದಲ್ಲಿ ಸಿಗುವ ಪ್ರತಿಯೊಬ್ಬ ಯುವಕ ಹಾಗೂ ಮಗುವಿಗೂ ವ್ಯಸನಮುಕ್ತ ಬದುಕಿನ ಮಹತ್ವ ತಿಳಿಸುತ್ತಿರುವ ಶಮಂತ ಅವರ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೊಡ್ಡ ಸಂಘಟನೆ ಅಥವಾ ವೇದಿಕೆಯಿಲ್ಲದಿದ್ದರೂ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಸಂಕಲ್ಪವಿದ್ದರೆ ಒಬ್ಬ ಯುವಕನೂ ಜಾಗೃತಿ ಮೂಡಿಸಬಹುದು ಎಂಬುದಕ್ಕೆ ಈ ಪ್ರಯತ್ನ ಸಾಕ್ಷಿಯಾಗಿದೆ.

ಮಾರ್ಗದಲ್ಲಿ ಸಿಗುವ ಯುವಕರು ಹಾಗೂ ಮಕ್ಕಳಿಗೆ ಗುಟಕಾ, ಧೂಮಪಾನದಿಂದ ದೂರವಿರುವಂತೆ ಕೈಮುಗಿದು ಕೇಳುತ್ತೇನೆ. ಪ್ರತಿ ವರ್ಷವೂ ಈ ಸೈಕಲ್ ಜಾಥಾ ಮಾಡುವ ಉದ್ದೇಶ ಹೊಂದಿದ್ದೇನೆ. ಇದರಿಂದ ಕಿಂಚಿತ್ತಾದರೂ ಸಮಾಜಕ್ಕೆ ಒಳಿತಾದರೆ ನನ್ನ ಪ್ರಯತ್ನ ಸಾರ್ಥಕ.-ಶಮಂತ ಕಮಲಾಕರಗೌಡ, ಸೈಕಲ್ ಜಾಗೃತಿ ಜಾಥಾ ನಡೆಸುತ್ತಿರುವ ಯುವಕ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img