ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಜನತಾಂತ್ರಿಕ ವ್ಯವಸ್ಥೆಯ ಬೇರುಗಳನ್ನು ಇನ್ನಷ್ಟು ಬಲಪಡಿಸುವುದು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬುವ ಉದ್ದೇಶದಿಂದ 18ನೇ ರಾಷ್ಟ್ರೀಯ ಪಂಚಾಯತ್ ಪರಿಷತ್ ಸಮ್ಮೇಳನವನ್ನು ಕರ್ನಾಟಕ ಪಂಚಾಯತ್ ರಾಜ್ ಪರಿಷತ್, ಬೆಂಗಳೂರು ಹಾಗೂ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಮತ್ತು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಾಯೋಜಕತ್ವದಲ್ಲಿ, ಡಿಸೆಂಬರ್ 13 ಮತ್ತು 14ರಂದು ಗದಗ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಪಂಚಾಯತ್ ಪರಿಷತ್ ಅಧ್ಯಕ್ಷರು ಮತ್ತು ಮಾಜಿ ಕೇಂದ್ರ ಸಚಿವ ಸುಬೋಧ್ ಕಾಂತ್ ಸಾಹಾಯ್ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಅಖಿಲ ಭಾರತ ಪಂಚಾಯತ್ ಪರಿಷತ್‌ನ 18ನೇ ರಾಷ್ಟ್ರೀಯ ಸಮ್ಮೇಳನ ಕುರಿತು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜನಸಾಮಾನ್ಯರ ನೇರ ಭಾಗವಹಿಸುವಿಕೆಯ ಆಶಯದಿಂದ ರೂಪಿಗೊಂಡ ಪಂಚಾಯತ್ ರಾಜ್ ವ್ಯವಸ್ಥೆಗೆ ರಾಷ್ಟ್ರಮಟ್ಟದಲ್ಲಿ ಮಾರ್ಗದರ್ಶನ ನೀಡುತ್ತಿರುವ ಅಖಿಲಭಾರತ ಪಂಚಾಯತ್ ಪರಿಷತ್ (NIPP) 1958ರಿಂದ ಪಂಚಾಯತ್ ಸಂಸ್ಥೆಗಳ ಬಲವರ್ಧನೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಪಂಚಾಯತ್ ಸಂಸ್ಥೆಗಳ ಬಲವರ್ಧನೆ, ವಿಕೇಂದ್ರೀಕೃತ ಆಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ನಿರಂತರ ಕೊಡುಗೆಯನ್ನು ನೀಡುತ್ತಿದ್ದು, ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರಾಷ್ಟ್ರಮಟ್ಟದ ಮಾದರಿಯಾಗಿ ರೂಪಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿಕೇಂದ್ರಿಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ ಮಾತನಾಡಿ, ಸಮ್ಮೇಳನದಲ್ಲಿ ತಾಂತ್ರಿಕ ಅಧಿವೇಶನಗಳು ಜರುಗಲಿದ್ದು, ಮೊದಲ ದಿನ ಗ್ರಾಮ ಸ್ವರಾಜ್ಯದ ಗಾಂಧೀಯ ತತ್ವಗಳು, ಪಂಚಾಯತ್ ಕಾಯ್ದೆಗಳು, ವಿಕೇಂದ್ರೀಕೃತ ಆಡಳಿತ, ನೀತಿ-ನಿಯಮಗಳು ಮತ್ತು ಸಮುದಾಯ ಸಬಲೀಕರಣ ಕುರಿತಂತೆ ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ದೇಶದ ಖ್ಯಾತ ಕ್ಷೇತ್ರ ತಜ್ಞರು, ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು ಮತ್ತು ಪಂಚಾಯತ್ ಚಳವಳಿಯ ನಾಯಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಚರ್ಚೆ ನಡೆಸಲಿದ್ದು, ಪ್ರಶೋತ್ತರ ಅವಧಿಗೂ ಅವಕಾಶ ನೀಡಲಾಗಿದೆ ಎಂದರು.
2ನೇ ದಿನದ ಸಮ್ಮೇಳನದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣ, ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ವಿಷಯಗಳ ಕುರಿತು ಪ್ರಮುಖ ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಮಟ್ಟದ ಪಂಚಾಯತ್ ಚಳವಳಿ ನಾಯಕರಿಂದ ಮತ್ತು ಹಿರಿಯ ಆಡಳಿತಗಾರರಿಂದ ಸಮಾರೋಪ ಭಾಷಣಗಳು ನಡೆಯಲಿವೆ ಎಂದರು.
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳು (ಪ್ರ) ಹಾಗೂ ಕುಲಸಚಿವರಾದ ಪ್ರೊ. ಡಾ. ಸುರೇಶ ವಿ. ನಾಡಗೌಡ ಮಾತನಾಡಿ, ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು ಡಿಸೆಂಬರ್ 13ರಂದು ಬೆಳಿಗ್ಗೆ 10.30 ಗಂಟೆಗೆ ಜರುಗಲಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಿ, ಉದ್ಘಾಟನಾ ಭಾಷಣ ಮಾಡುವರು. ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಘನ ಉಪಸ್ಥಿತಿಯನ್ನು ವಹಿಸಲಿದ್ದಾರೆ. ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ&ಬಿಟಿ ಸಚಿವರು ಮತ್ತು ಎಂ.ಜಿ.ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿಗಳಾದ ಪ್ರಿಯಾಂಕ ಖರ್ಗೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನೂನು, ನ್ಯಾಯ, ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲವರು ವಹಿಸಲಿದ್ದಾರೆ.
ಅತಿಥಿಗಳಾಗಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ. ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ, ಅಖಿಲ ಭಾರತ ಪಂಚಾಯತ್ ಪರಿಷತ್ ಅಧ್ಯಕ್ಷರು ಮತ್ತು ಮಾಜಿ ಕೇಂದ್ರ ಸಚಿವ ಸುಬೋಧ್ ಕಾಂತ್ ಸಾಹಾಯ್, ಜಿಲ್ಲೆಯ ಸಂಸದರು, ಶಾಸಕರು, ಜಿಲ್ಲಾ-ತಾಲೂಕು-ಗ್ರಾಮ ಪಂಚಾಯತ್ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ವಿ.ವೈ. ಘೋರ್ಪಡೆ, ತ್ರಿಪುರ ರಾಜ್ಯದ ಶಾಸಕ ರಾಜೀವ ಸಿನ್ಹ, ಪಂಚಾಯತ್ ಪರಿಷತ್ ಕಾರ್ಯದರ್ಶಿ ಅಶೋಕ ಚೌಹಾಣ, ವಾಸಣ್ಣ ಕುರಡಗಿ, ಜೆ.ಕೆ. ಜಮಾದಾರ, ಪ್ರಕಾಶ ಮಾಚೇನಹಳ್ಳಿ ಹಾಜರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷ ವಿ.ವೈ. ಘೋರ್ಪಡೆ, ಉಪಾಧ್ಯಕ್ಷರಾದ ಸೌಭಾಗ್ಯ ಬಸವರಾಜ್ ಉಪಸ್ಥಿತರಿರುವರು. ಸಮ್ಮೇಳನದಲ್ಲಿ ರಾಜ್ಯ ಮತ್ತು ರಾಷ್ಟ್ರದ ವಿವಿಧ ಭಾಗಗಳಿಂದ 1500ಕ್ಕೂ ಹೆಚ್ಚು ಪಂಚಾಯತ್ ಪ್ರತಿನಿಧಿಗಳು, ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ವಿಷಯ ತಜ್ಞರು, ವಿಶ್ವವಿದ್ಯಾಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕುಲಪತಿ ಡಾ. ಸುರೇಶ ನಾಡಗೌಡ ತಿಳಿಸಿದರು.
ಬಲವಂತರಾಯ್ ಮೇಹ್ವಾ ಸಮಿತಿಯು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಮೂಲಭೂತ ರೂಪುರೇಷೆ ನೀಡಿದರೆ, ಅಶೋಕ್ ಮೇಹ್ವಾ ಮತ್ತು ಎಲ್.ಎಂ. ಸಿಂಗ್ವಿ ಸಮಿತಿಗಳು ಸಂಸ್ಥಾತ್ಮಕ ಸ್ವಾಯತ್ತತೆ ಮತ್ತು ಪ್ರಜಾಸತ್ತಾತ್ಮಕ ಸ್ಥಿರತೆಯ ದೃಢತೆಗೆ ಅಗತ್ಯವಾದ ಮಹತ್ವದ ಶಿಫಾರಸುಗಳನ್ನು ಮಾಡಿದವು. ಈ ಶಿಫಾರಸುಗಳ ಆಧಾರದಲ್ಲಿ ಪ್ರಧಾನಮಂತ್ರಿ ದಿ. ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಬದ್ಧ ಸ್ಥಾನಮಾನ ನೀಡುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡು, ಗ್ರಾಮಮಟ್ಟದ ಆಡಳಿತವನ್ನು ಭಾರತದ ಜನತಾಂತ್ರಿಕ ವ್ಯವಸ್ಥೆಯ ಆಧಾರಸ್ತಂಭವಾಗಿ ಬಲಪಡಿಸುವ ಅಡಿಪಾಯ ಹಾಕಿದರು.
ಸುಬೋಧ್ ಕಾಂತ್ ಸಾಹಾಯ್
ಅಖಿಲ ಭಾರತ ಪಂಚಾಯತ್ ಪರಿಷತ್ ಅಧ್ಯಕ್ಷರು.



