ಲಕ್ನೋ: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಆನ್‌ಲೈನ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಯನ್ನು ಉತ್ತರ ಪ್ರದೇಶದ ಎಟಿಎಸ್ ಬಂಧಿಸಿದೆ.
ಸಹರಾನ್ಪುರ ಜಿಲ್ಲೆಯ ನಿವಾಸಿ ಹರಿಶ್ ಅಲಿ ಬಂಧಿತ ಆರೋಪಿ. ಮೊರಾದಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಈತನನ್ನು ವಶಕ್ಕೆ ಪಡೆದುಕೊಂಡಿದೆ.
ಭಾರತದಲ್ಲಿ ಐಸಿಸ್ ಸಂಬಂಧಿತ ಆನ್‌ಲೈನ್ ಚಟುವಟಿಕೆಗಳ ಕುರಿತು ನಡೆಯುತ್ತಿದ್ದ ತನಿಖೆಯ ವೇಳೆ ಈತನ ಸಂಪರ್ಕ ಬಹಿರಂಗವಾಗಿದೆ. ಎರಡನೇ ವರ್ಷದ ಬಿಡಿಎಸ್ ವಿದ್ಯಾರ್ಥಿಯಾಗಿರುವ ಆರೋಪಿ, ಇನ್‌ಸ್ಟಾಗ್ರಾಮ್ ಹಾಗೂ ಡಿಸ್ಕಾರ್ಡ್‌ನಂತಹ ಎನ್ಕ್ರಿಪ್ಟ್ ಮಾಡಿದ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಐಸಿಸ್ ನಿರ್ವಾಹಕರ ಜೊತೆ ಸಂಪರ್ಕದಲ್ಲಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ದೇಶದ ವಿವಿಧ ಭಾಗಗಳಲ್ಲಿ ಷರಿಯಾ ಆಧಾರಿತ ಖಲೀಫತ್ ವ್ಯವಸ್ಥೆ ಸ್ಥಾಪನೆಗೆ ಬೆಂಬಲ ನೀಡುವ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಜೊತೆಗೆ, ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡುವುದು ಹಾಗೂ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (VPN) ಬಳಸಿಕೊಂಡು ಹಲವಾರು ಗುಂಪುಗಳನ್ನು ರಚಿಸಿ, ಬೇರೆ ಬೇರೆ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಲಕ್ನೋದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಅನಧಿಕೃತ ಚಟುವಟಿಕೆಗಳ ತಡೆ ಕಾಯ್ದೆ (UAPA) ಮತ್ತು ಬಿಎನ್ಎಸ್‌ನ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.



