ಬೆಳಗಾವಿ: ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖೋಟಾ ನೋಟು ದಂಧೆಯನ್ನು ಭೇದಿಸಿದ್ದಾರೆ.
ಗೋವಾ ಮೂಲದ ಗ್ಯಾಂಗ್ ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ವೇಳೆ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮೊಹಮ್ಮದ್ ಅರ್ಬಾಜ್ (21), ರೂಪೇಶ್ ವಾಕೋಡೆ (26), ಮೊಹಮ್ಮದ್ ಹುಸೇನ್ ಭಕ್ಷಿ (23) ಹಾಗೂ ಶ್ರವಣಕುಮಾರ (25) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಂದು ಕಾರು, 2.40 ಲಕ್ಷ ರೂ ಮುಖಬೆಲೆಯ ಖೋಟಾ ನೋಟುಗಳು ಮತ್ತು ನಾಲ್ಕು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ತನಿಖೆ ಪ್ರಕಾರ, ಆರೋಪಿಗಳು 1 ಲಕ್ಷ ರೂ ಅಸಲಿ ಹಣಕ್ಕೆ 2 ಲಕ್ಷ ರೂ ಖೋಟಾ ನೋಟುಗಳನ್ನು ನೀಡುವ ಮೂಲಕ ದಂಧೆ ನಡೆಸುತ್ತಿದ್ದರು. ಬೆಳಗಾವಿಯ ಖಡೇಬಜಾರ್‌ನ ಅಂಗಡಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ವೇಳೆ ಅಂಗಡಿ ಮಾಲೀಕನಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಪ್ರಕರಣದ ಹಿನ್ನಲೆಯಲ್ಲಿ ದೊಡ್ಡ ಜಾಲವಿರುವುದು ಬೆಳಕಿಗೆ ಬಂದಿದೆ. ಗೋವಾದಲ್ಲಿ ಜೈಲಿನಲ್ಲಿರುವ ಮೊಹಮ್ಮದ್ ಸರ್ಫರಾಜ್ ಈ ದಂಧೆಯ ಪ್ರಮುಖ ಸೂತ್ರಧಾರ ಎಂದು ತಿಳಿದುಬಂದಿದೆ. ಆತ ಜೈಲಿನಿಂದಲೇ ಫೋನ್ ಮೂಲಕ ದಂಧೆಯನ್ನು ನಿಯಂತ್ರಿಸುತ್ತಿದ್ದನೆಂಬ ಶಂಕೆ ವ್ಯಕ್ತವಾಗಿದೆ. ಬಂಧಿತ ಅರ್ಬಾಜ್ ತನ್ನ ಅಣ್ಣ ಸರ್ಫರಾಜ್ ಸೂಚನೆಯಂತೆ ಖೋಟಾ ನೋಟುಗಳನ್ನು ತರಿಸಿಕೊಂಡು ವಿತರಣೆ ಮಾಡುತ್ತಿದ್ದನೆಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅಪರಿಚಿತ ವ್ಯಕ್ತಿಯಿಂದ ಖೋಟಾ ನೋಟು ಪೂರೈಕೆ ನಡೆದಿರುವ ಸುಳಿವು ಸಿಕ್ಕಿದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.



