ಚಿಕ್ಕಮಗಳೂರು: ಜಿಲ್ಲೆಯ ಹುಣಸೆಹಳ್ಳಿ ಗ್ರಾಮ ಮತ್ತೊಮ್ಮೆ ಕಾಡಾನೆ ದಾಳಿಯಿಂದ ನಲುಗಿದೆ. ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ಹೊಸಪೇಟೆ ಮೂಲದ ಕಾರ್ಮಿಕ ಮಹಿಳೆ ಬೋರಮ್ಮ (34) ಕಾಡಾನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಇದೇ ತೋಟದಲ್ಲಿ 7 ದಿನಗಳ ಹಿಂದೆ ಹಾವೇರಿ ಮೂಲದ 50 ವರ್ಷದ ಯಲ್ಲಪ್ಪ ಆನೆ ದಾಳಿಗೆ ಬಲಿಯಾಗಿದ್ದರು. ಒಂದೇ ತೋಟದಲ್ಲಿ ವಾರದೊಳಗೆ 2 ಜೀವ ಕಳೆದುಹೋಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸ್ಪಷ್ಟಪಡಿಸಿದೆ.
ಮಾಹಿತಿಯಂತೆ, ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ತೀವ್ರ ಗಾಯಗೊಂಡ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಮುಂಚಿತವಾಗಿ ತೋಟಗಳಿಗೆ ತೆರಳಬಾರದು ಎಂದು ಎಚ್ಚರಿಕೆ ನೀಡಿದ್ದರೂ, ಬದುಕಿನ ಹೋರಾಟ ಕಾರ್ಮಿಕರನ್ನು ಅಪಾಯದ ಮಧ್ಯೆ ನಿಲ್ಲಿಸಿದೆ.
ಘಟನೆ ಬಳಿಕ ವೇಗವಾಗಿ ಕಾರ್ಯಾಚರಣೆ ಕೈಗೊಳ್ಳಲಾಯಿತು. 7 ಕುಮ್ಕಿ ಆನೆಗಳು ಹಾಗೂ 75 ಸಿಬ್ಬಂದಿಗಳ ತಂಡ ದಾಳಿ ನಡೆಸಿದ ಆನೆಯನ್ನು ಸಮೀಪದ ಕಾಫಿ ತೋಟದಲ್ಲೇ ಪತ್ತೆಹಚ್ಚಿತು. ಅರವಳಿಕೆ ಚುಚ್ಚುಮದ್ದು ನೀಡಿ ನಿತ್ರಾಣಗೊಳಿಸಿ, ಬಳಿಕ ಕುಮ್ಕಿಗಳ ನೆರವಿನಿಂದ ಕಾಡಾನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದು ಸೆರೆ ಹಿಡಿಯಲಾಯಿತು.
ಇದರಿಂದ ಪರಿಸ್ಥಿತಿ ತಾತ್ಕಾಲಿಕವಾಗಿ ನಿಯಂತ್ರಣಕ್ಕೆ ಬಂದರೂ, ಗ್ರಾಮಸ್ಥರ ಆಕ್ರೋಶ ಉಗ್ರವಾಗಿದೆ. ಕಡಬಗೆರೆ ಗ್ರಾಮದಲ್ಲಿ ಮೃತದೇಹ ಸಾಗಿಸುತ್ತಿದ್ದ ವಾಹನವನ್ನು ತಡೆದು ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದರು. ಸಂತ್ರಸ್ತ ಕುಟುಂಬಕ್ಕೆ ತಕ್ಷಣ ಸಮರ್ಪಕ ಪರಿಹಾರ ಮತ್ತು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಡಾನೆ-ಮಾನವ ಸಂಘರ್ಷ ದಿನೇದಿನೇ ತೀವ್ರವಾಗುತ್ತಿರುವ ಹಿನ್ನೆಲೆ, ಅರಣ್ಯ ಇಲಾಖೆಯ ಕ್ರಮಗಳು ಮತ್ತು ಸರ್ಕಾರದ ನಿಲುವು ಇದೀಗ ಪ್ರಶ್ನಾರ್ಥಕವಾಗಿದೆ.



