ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಹೊಸ ವರ್ಷದ ಮೊದಲ ದಿನವೇ ಶಾಸಕ ಡಾ.ಚಂದ್ರು ಲಮಾಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ 2 ಹೊಸ ಬಸ್‌ಗಳ ಕಾರ್ಯಾರಂಭಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣವಾಗಿರುವುದು ಸತ್ಯ. ಅಲ್ಲದೇ ರಸ್ತೆಗಳ ಸ್ಥಿತಿಯೂ ಬಹಳಷ್ಟು ಹದಗೆಟ್ಟಿದೆ. ಸಾರಿಗೆ ಇಲಾಖೆಯಲ್ಲಿ ನೌಕರರ ಕೊರತೆಯೂ ಇದೆ. ಈ ಎಲ್ಲದರ ನಡುವೆ ಜನರಿಗೆ ಅತ್ಯವಶ್ಯಕವಾದ ಸಾರಿಗೆ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಕಾಲಿಕ ಬಸ್ಸಿನ ಸೇವೆ ನೀಡುವ ಗುರುತರ ಜವಾಬ್ದಾರಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಭಾಯಿಸಬೇಕು.
ಹತ್ತಾರು ಸಮಸ್ಯೆಗಳ ನಡುವೆ ಲಕ್ಮೇಶ್ವರ ಘಟಕದ ಅಧಿಕಾರಿಗಳು, ಚಾಲಕ-ನಿರ್ವಾಹಕ ಮತ್ತು ಸಿಬ್ಬಂದಿ ವರ್ಗ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಹಿಂದುಳಿದ ಶಿರಹಟ್ಟಿ ಕ್ಷೇತ್ರಕ್ಕೆ ಇನ್ನಷ್ಟು ಹೊಸ ಬಸ್‌ಗಳನ್ನು ನೀಡಬೇಕೆಂದು ಸಾರಿಗೆ ಇಲಾಖೆ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.
ಈ ವೇಳೆಗೆ ಬಿಜೆಪಿ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತೆಶೆಟ್ಟರ, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ವಿಜಯ ಬೂದಿಹಾಳ, ಗಿರೀಶ್ ಚೌರಡ್ಡಿ, ಮಂಜುನಾಥ ಗೊರವರ, ಬಸವರಾಜ ಚಕ್ರಸಾಲಿ, ಸಂತೋಷ ಜಾವೂರ್, ಶಕ್ತಿ ಕತ್ತಿ, ಅನಿಲ ಮೂಲಗುಂದ, ರಾಜು ರೆಡ್ಡಿ, ತುಕಪ್ಪ ಪೂಜಾರ, ವೀರೇಶ ತಂಗೋಡ, ಜಾನು ಲಮಾಣಿ, ಘಟಕದ ವ್ಯವಸ್ಥಾಪಕಿ ಸವಿತಾ ಆದಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.