ಹಲವು ಮನೆಗಳಿಂದ ದೂರವಾದ `ಗೃಹಜ್ಯೋತಿ’

0
200 units free electricity scheme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಈವರೆಗೂ ಲಾಭ ಪಡೆದು ಸರ್ಕಾರವನ್ನು ಹೊಗಳಿ ಬೀಗಿದ್ದರು. ಪ್ರತೀ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಉಳಿತಾಯವಾದರೆ, ಅದೇ ಹಣವನ್ನು ಬೇರೆ ಕಾರ್ಯಗಳಿಗೆ ವಿನಿಯೋಗಿಸಬಹುದು ಎಂದು ಬಡ ಕುಟುಂಬಗಳ ಮಹಿಳೆಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ದಿನಕಳೆದಂತೆ, `ಗೃಹಜ್ಯೋತಿ’ಯ ಬೆಳಕು ಮಂಕಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇಷ್ಟು ದಿನ 100 ರೂ ಒಳಗೆ ಬರುತ್ತಿದ್ದ ಬಿಲ್ ಇದೀಗ ಏಕಾಏಕಿ 400-500 ರೂ ಬರತೊಡಗಿದ್ದು, ಉಚಿತ ಎಂದು ಹೇಳಿ ಸರ್ಕಾರ ನಮಗೆ ಮೋಸ ಮಾಡುತ್ತಿದೆ ಎಂದು ಕಿಡಿಕಾರತೊಡಗಿದ್ದಾರೆ.

Advertisement

ಹೆಸ್ಕಾಂ ನೀಡಿದ ಬಿಲ್ ನೋಡಿ ಬಡ ಮಹಿಳೆಯ ಕಂಗಾಲಾಗಿದ್ದಾರೆ. 200 ಯುನಿಟ್ ಉಚಿತ ವಿದ್ಯುತ್ ಯೋಜನೆ ವಿರುದ್ಧ ಗದಗ ನಗರದ ಗಂಗಿಮಡಿ ಬಡಾವಣೆಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

200 units free electricity scheme

ಈ ಬಾಡವಣೆಯಲ್ಲಿ ಕಡು ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದು, ದುಡಿದರಷ್ಟೇ ಬದುಕು ಎನ್ನುವ ಸ್ಥಿತಿಯಿದೆ. 200 ಯುನಿಟ್ ಉಚಿತ ವಿದ್ಯುತ್ ಯೋಜನೆ ಆರಂಭದಲ್ಲಿ ಈ ಬಡ ಕುಟುಂಬಗಳಲ್ಲಿ ಖುಷಿ ತಂದಿತ್ತು.

ಯೋಜನೆ ಆರಂಭದಲ್ಲಿ 20-30 ರೂಪಾಯಿ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ, ಈಗ ಬಹುತೇಕ ಮನೆಗಳಿಗೆ ದುಪ್ಪಟ್ಟು ವಿದ್ಯುತ್ ಬಿಲ್ ಬರತೊಡಗಿದೆ. ಕಡು ಬಡವರಾದ ನಾವು ಪ್ರತಿ ತಿಂಗಳು 400,-600 ರೂ ಬಿಲ್ ತುಂಬುವುದು ಹೇಗೆ ಎಂಬ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.

200 units free electricity scheme

ಸದರಿ ವಿದ್ಯುತ್ ಬಿಲ್ ನೋಡಿ ಬಡ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಚುನಾವಣೆಯಲ್ಲಿ ಭರವಸೆ ನೀಡಿ ಕಾಂಗ್ರೆಸ್ ಮೋಸ ಮಾಡಿದೆ. ಬಡವರ ಬದುಕಿನ ಜೊತೆ ಆಟವಾಡಬಾದು ಎಂದು ಬಹುತೇಕ ಮಹಿಳೆಯರು ಅಪಸ್ವರವೆತ್ತಿದ್ದಾರೆ. ಗದುಗಿನಲ್ಲಿ 200 ಯುನಿಟ್ ಉಚಿತ ವಿದ್ಯುತ್ ಯೋಜನೆ ಹಳ್ಳ ಹಿಡಿದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಬಡಾವಣೆಯ ಬಹುತೇಕ ಮನೆಗಳಲ್ಲಿ ಟಿವಿ, ಫ್ರಿಡ್ಜ್ಗಳಿಲ್ಲ. ಪುಟ್ಟ ಪುಟ್ಟ ಮನೆಗಳಲ್ಲಿ ಎರಡು, ಮೂರು ವಿದ್ಯುತ್ ಬಲ್ಬ್ಗಳು ಮಾತ್ರ ಬಳಕೆಯಾಗುತ್ತವೆ. ಹೀಗಿದ್ದರೂ 400ರಿಂದ 600 ರೂ ಬಿಲ್ ಬರಲಾರಂಭಿಸಿದ್ದು, ಸಹಜವಾಗಿಯೇ ಚಿಂತೆಗೀಡುಮಾಡಿದೆ.

ಹೀಗೆ ಏಕಾಏಕಿ ನಿಗದಿಗಿಂತ ಹೆಚ್ಚು ಬಿಲ್ ಬರಲು ಕಾರಣವೇನು, ಉಚಿತ ವಿದ್ಯುತ್ ಯೋಜನೆಯ ಲಾಭ ಸಿಗದಿರುವುದೇಕೆ ಎಂಬುದರ ಕುರಿತು ಹೆಸ್ಕಾಂ ಅಧಿಕಾರಿಗಳೇ ಸೂಕ್ತ ಮಾಹಿತಿ, ಪರಿಹಾರ ಸೂಚಿಸಿ, ಈ ಬಡಾವಣೆಯ ಬಡ ಮಹಿಳೆಯರ ಗೊಂದಲ, ಆತಂಕಗಳನ್ನು ದೂರ ಮಾಡುತ್ತಾರಾ ಕಾದು ನೋಡಬೇಕಿದೆ.

ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದರೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮನೆ ಮಾಲೀಕರ ಗಮನಕ್ಕೂ ತಾರದೇ ಬಿಲ್ ಕಟ್ಟಿಲ್ಲ ಎಂದು ಮನೆಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತಿದೆ. ಜನ ಪ್ರತಿನಿಧಿಗಳು ಬರಲಿ, ಅವರನ್ನೇ ವಿಚಾರಿಸುತ್ತೇವೆ, ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ನಡೆದುಕೊಂಡರೆ ಸುಮ್ಮನಿರುವುದಿಲ್ಲ, ಬಡವರ ಬದುಕಿನೊಂದಿಗೆ ಆಟವಾಡಿದರೆ ಸಂದರ್ಭ ಬಂದಾಗ ತಕ್ಕ ಪಾಠ ಕಲಿಸುತ್ತೇವೆ ಎಂದು ಮಹಿಳೆಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here