ಬೆಂಗಳೂರು: 2023ರ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್ ವಾಂಟೆಡ್ ಶಂಕಿತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಅರ್ಷದ್ ಖಾನ್ ಎಂದು ಗುರುತಿಸಲಾಗಿದೆ. ಈತ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ರೂವಾರಿ ಜುನೈದ್ ಅಹ್ಮದ್‌ನ ಆಪ್ತ ಸ್ನೇಹಿತನಾಗಿದ್ದಾನೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಈ ಹಿಂದೆ ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅರ್ಷದ್ ಖಾನ್‌ನ್ನು ಶಂಕೆ ಮೇರೆಗೆ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದನು. ಪ್ರಕರಣ ಎನ್‌ಐಎಗೆ ವರ್ಗಾವಣೆಯಾದ ಬಳಿಕ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಪರಿಣಾಮವಾಗಿ ಶಂಕಿತನ ವಿರುದ್ಧ ಪ್ರೊಕ್ಲಮೇಷನ್ ಜಾರಿಗೊಳಿಸಲಾಗಿತ್ತು.
ಇದೀಗ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ರೂವಾರಿ ಜುನೈದ್ ಅಹ್ಮದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತ ಅರ್ಷದ್ ಖಾನ್‌ನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.



