ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೇವಲ 22 ರೂ. ಶುಲ್ಕ ಭರಿಸದ್ದಕ್ಕೆ ಬಡಕುಟುಂಬದ ಪ್ರತಿಭಾಂತ ವಿದ್ಯಾರ್ಥಿನಿಯೋರ್ವಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತಳಾಗಿದ್ದಾಳೆ. ಹೌದು, ರಾಜ್ಯದ ಪ್ರಭಾವಿ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಾಲೆ ವಿದ್ಯಾರ್ಥಿನಿ, ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆಯ ಗ್ರೀಷ್ಮ ನಾಯಕ್ ಎನ್. ಪರೀಕ್ಷೆಯಿಂದ ವಂಚಿತಳಾದ ನೃತದೃಷ್ಟಳು.

ಈಕೆ ತನ್ನ 9ನೇ ತರಗತಿಯ ಶಾಲಾ ಶುಲ್ಕದಲ್ಲಿ ಸ್ವಲ್ಪ ಹಣವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಭರಿಸಬೇಕಾಗಿತ್ತು. ಆದರೆ ಕೊರೊನಾ ಲಾಕ್‌ಡೌನ್ ನಿಂದಾಗಿ ಶುಲ್ಕ ಭರಿಸಲು ಆಗಿರಲಿಲ್ಲ. ಶೇ. 96 ಅಂಕ ಪಡೆದು 9ನೇ ತರಗತಿಯನ್ನೂ ವಿದ್ಯಾರ್ಥಿನಿ ಪಾಸ್ ಮಾಡಿದ್ದಳು.

ಹೀಗಾಗಿ ಸರ್ಕಾರದ ಸುತ್ತೊಲೆಯಂತೆ 9ನೇ ತರಗತಿ ಪಾಸ್ ಆಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಸುವುದು ಶಾಲೆಯ ಜವಾಬ್ದಾರಿಯೂ ಆಗಿತ್ತು. ಜುಲೈ 19 ಹಾಗೂ 22 ರಂದು ನಡೆಯಲಿರುವ ಪರೀಕ್ಷೆಗೆ ಈ ವಿದ್ಯಾರ್ಥಿನಿ ಹಾಜರಾಗಲು ಅವಕಾಶ ಇಲ್ಲದಂತಾಗಿದೆ.
ಸಂಪೂರ್ಣ ಶುಲ್ಕ ಭರಿಸಲು ಸಮಯಾವಕಾಶ ಬೇಕು ಎಂದು ವಿದ್ಯಾರ್ಥಿನಿ ಲಿಖಿತ ಪತ್ರವನ್ನೂ ಶಾಲೆಗೆ ಕೊಟ್ಟಿದ್ದಳು. ಅದ್ಯಾವುದಕ್ಕೂ ಆಳ್ವಾಸ್ ಶಾಲೆ ಮನ್ನಣೆ ಕೊಟ್ಟಿಲ್ಲ ಎಂಬುದು ವಿದ್ಯಾರ್ಥಿನಿಯ ತಂದೆ ನರಸಿಂಹ ಮೂರ್ತಿ ಅವರ ಆರೋಪ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಆ ವಿದ್ಯಾರ್ಥಿನಿ ಎರಡು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ.

ಕಳೆದ ಡಿಸೆಂಬರ್ 2020ರಲ್ಲಿಯೇ ಈ ವಿದ್ಯಾರ್ಥಿನಿ ಇ-ಮೇಲ್ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿರುದ್ಧ ದೂರು ಕೊಟ್ಟಿದ್ದರು. ಜೊತೆಗೆ ನಿನ್ನೆ(ಜು.15)ಯೂ ಕೂಡ ತನ್ನ ಸಮಸ್ಯೆಯನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಗಮನಕ್ಕೆ ತಂದಿದ್ದಾರೆ.
ವಿದ್ಯಾರ್ಥಿನಿಯ ಮನವಿಗೆ ಸ್ಪಂದಿಸಿದ್ದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ತಮ್ಮ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ “ನಾನೇ ಗ್ರೀಷ್ಮ ಜೊತೆ ಮಾತನಾಡಿದ್ದೇನೆ. ಪರಿಹಾರ ಸೂಚಿಸಿದ್ದೇನೆ” ಎಂದು ಸ್ಪಷ್ಟನೆ ಕೊಟ್ಟಿದ್ದರು.
ಆದರೆ, ಅಷ್ಟಕ್ಕೂ ಸಚಿವ ಸುರೇಶ್ ಕುಮಾರ್ ಆ ವಿದ್ಯಾರ್ಥಿನಿಗೆ ಹೇಳಿದ್ದೇನು? ಗೊತ್ತಾ, ಈಗ ಬೇಡ. ಆಗಸ್ಟ್ ತಿಂಗಳಲ್ಲಿ ನಡೆಯುವ ಸೆಪ್ಲಿಮೆಂಟರಿ ಪರೀಕ್ಷೆ ಬರೆಯುವಂತೆ ತಿಳಿಸಿದ್ದನ್ನು ಕಂಡು ವಿದ್ಯಾರ್ಥಿನಿ ವಿಚಲಿತಳಾಗಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಿನಲ್ಲೇ ತನ್ನ ಸಮಸ್ಯೆಯನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದ ವಿದ್ಯಾರ್ಥಿನಿ ಗ್ರೀಷ್ಮ ಅವರು, ಇ-ಮೇಲ್ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿರುದ್ಧ ದೂರು ಕೊಟ್ಟಿದ್ದರು. “ನಮ್ಮ ಶಾಲೆಯವರು ಸಂಪೂರ್ಣ ಶುಲ್ಕ ತುಂಬಲು ಕೇಳುತ್ತಿದ್ದಾರೆ. ಫೀಸ್ ತುಂಬಲು ನಮಗೆ ಸಮಯಾವಕಾಶ ಕೊಡಿಸಿ ಸರ್. ಯಾವುದೇ ರಿಯಾಯತಿ ನಮಗೆ ಬೇಡ. ಕಷ್ಟದಲ್ಲಿದ್ದೇವೆ, ನಮಗೆ ಸಮಯ ಕೊಡಿಸುವ ಸಹಾಯ ಮಾಡಿ” ಎಂದು ವಿನಂತಿಸಿಕೊಂಡಿದ್ದಳು.
ಆ ದೂರು ಆಧರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚಿಸಿದ್ದರು. ಆದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಆಳ್ವಾಸ್ ಶಾಲೆ ವಿದ್ಯಾರ್ಥಿಯನಿಯ ನೋಂದಣಿ ಮಾಡಿಸಿಲ್ಲ.
ತನ್ನದಲ್ಲದ ತಪ್ಪಿದೆ ಒಂದು ವರ್ಷ ಹಿಂದೆ ಉಳಿಯಬೇಕಾಗಿದೆ. ಇಡೀ ಪ್ರಕರಣದ ಕುರಿತು ರಾಜ್ಯ ಶಿಕ್ಷಣ ಇಲಾಖೆ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ಇದೇ ರೀತಿ ಎಷ್ಟು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂಬುದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಮೇಲಿದೆ.