ದುಬೈ: ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದರೆ ಸುಮಾರು 2,200 ಕೋಟಿ ರೂ. ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆಯಿದೆ. ಈ ನಷ್ಟವು ಕೇವಲ ಐಸಿಸಿಗೆ ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್, ಬಿಸಿಸಿಐ, ಶ್ರೀಲಂಕಾ ಕ್ರಿಕೆಟ್ ಮಂಡಳಿ, ಟೂರ್ನಿ ಪ್ರಾಯೋಜಕರು, ಪ್ರಸಾರಕರು ಹಾಗೂ ಜಾಹೀರಾತುದಾರರಿಗೂ ಅನ್ವಯವಾಗಲಿದೆ ಎಂದು ವರದಿಯಾಗಿದೆ.
ಕ್ರಿಕೆಟ್ನಲ್ಲಿ ಭಾರತ–ಪಾಕಿಸ್ತಾನ ಪಂದ್ಯವು ಪ್ರಸಾರ ಹಕ್ಕು, ಟಿಕೆಟ್ ಮಾರಾಟ, ಜಾಹೀರಾತು, ಪ್ರಾಯೋಜಕತ್ವ ಹಾಗೂ (ಭಾರತದ ಹೊರಗಡೆ) ಕಾನೂನುಬದ್ದ ಬೆಟ್ಟಿಂಗ್ ಸೇರಿದಂತೆ ಹಲವು ಮೂಲಗಳಿಂದ ಅಪಾರ ಆದಾಯ ತರುತ್ತದೆ. ಈ ಪಂದ್ಯ ರದ್ದಾದರೆ ಆ ಎಲ್ಲಾ ಆದಾಯ ಮಾರ್ಗಗಳಿಗೆ ಭಾರೀ ಹೊಡೆತ ಬೀಳಲಿದೆ.
ಎಷ್ಟು ನಷ್ಟವಾಗಲಿದೆ?
– ಭಾರತ–ಪಾಕಿಸ್ತಾನ ಐಸಿಸಿ ಪಂದ್ಯದ ಅಂದಾಜು ಮೌಲ್ಯ: 250 ಮಿಲಿಯನ್ ಯುಎಸ್ ಡಾಲರ್ (2,200 ಕೋಟಿ ರೂ.ಕ್ಕಿಂತ ಹೆಚ್ಚು)
– ಜಾಹೀರಾತು ಆದಾಯ: 200–250 ಕೋಟಿ ರೂ.
– 10 ಸೆಕೆಂಡ್ ಜಾಹೀರಾತು ಸ್ಲಾಟ್ ವೆಚ್ಚ: 20–40 ಲಕ್ಷ ರೂ.
– ಭಾರತದ ಮಾಧ್ಯಮ ಹಕ್ಕುಗಳ ಒಪ್ಪಂದ (ಜಿಯೋಸ್ಟಾರ್–ಐಸಿಸಿ): 3 ಬಿಲಿಯನ್ ಡಾಲರ್
ಪಂದ್ಯ ನಡೆಯದೇ ಹೋದರೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ತಲಾ ಸುಮಾರು 200 ಕೋಟಿ ರೂ. ನಷ್ಟವನ್ನು ಎದುರಿಸಬೇಕಾಗುತ್ತದೆ. ಜೊತೆಗೆ, ಪಂದ್ಯ ರದ್ದಾದರೆ ಐಸಿಸಿಯು ಪ್ರಾಯೋಜಕರು ಮತ್ತು ಪ್ರಸಾರಕರಿಗೆ ನಷ್ಟ ಪರಿಹಾರ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದು.
ಐಸಿಸಿಗೆ ಅತ್ಯಧಿಕ ಆದಾಯ ದೊರೆಯುವುದು ಪ್ರಸಾರ ಹಕ್ಕುಗಳಿಂದಾಗಿದ್ದು, ಈ ಆದಾಯವನ್ನು ಪ್ರತಿವರ್ಷ ವಿವಿಧ ದೇಶಗಳಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ವಿವಿಧ ಕ್ರಿಕೆಟ್ ಮಂಡಳಿಗಳಿಗೆ ಹಂಚಲಾಗುತ್ತದೆ. ಆದರೆ ಪ್ರಮುಖ ಪಂದ್ಯ ರದ್ದಾದರೆ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಜಿಂಬಾಬ್ವೆ, ನಮೀಬಿಯಾ, ಅಫ್ಘಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳಿಗೆ ನೀಡಬೇಕಿದ್ದ ಆದಾಯ ಕಡಿತಗೊಳ್ಳುವ ಸಾಧ್ಯತೆಯಿದೆ.
2024–2027ರ ಅವಧಿಯ ಐಸಿಸಿ ಪಂದ್ಯಗಳ ಭಾರತದ ಪ್ರಸಾರ ಹಕ್ಕನ್ನು ಡಿಸ್ನಿ ಸ್ಟಾರ್ ಸಂಸ್ಥೆ 2022ರಲ್ಲಿ 3 ಬಿಲಿಯನ್ ಡಾಲರ್ಗಳಿಗೆ (ಸುಮಾರು 25 ಸಾವಿರ ಕೋಟಿ ರೂ.) ಖರೀದಿಸಿತ್ತು. ಈ ಒಪ್ಪಂದದಲ್ಲಿ ಅತಿ ಹೆಚ್ಚು ಆದಾಯ ತರುವ ಪಂದ್ಯವೆಂದರೆ ಭಾರತ–ಪಾಕಿಸ್ತಾನ ಮುಖಾಮುಖಿ. ಈ ಪ್ರಮುಖ ಪಂದ್ಯ ನಡೆಯದೇ ಹೋದರೆ ಜಿಯೋ ಹಾಟ್ಸ್ಟಾರ್ಗೆ ಭಾರೀ ಆರ್ಥಿಕ ನಷ್ಟವಾಗುವ ಸಾಧ್ಯತೆಯಿದೆ. ಹೀಗಾಗಿ ಈ ಪ್ರಸಾರ ಹಕ್ಕುಗಳ ಒಪ್ಪಂದವನ್ನು ಮರುಪರಿಶೀಲಿಸುವಂತೆ ಜಿಯೋ ಹಾಟ್ಸ್ಟಾರ್ ಐಸಿಸಿಗೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.



