ತುಮಕೂರು:-ಬೀಗರೂಟ ಮಾಡಿದ 24 ಮಂದಿ ಅಸ್ವಸ್ಥಗೊಂಡಿದ್ದು, ಕಳ್ಳಬಟ್ಟಿ ಸೇವಿಸಿರೋ ಶಂಕೆ ವ್ಯಕ್ತವಾಗಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ಘಟನೆ ಜರುಗಿದೆ. ಸದ್ಯ ಅಸ್ವಸ್ಥಗೊಂಡವರು ಸ್ಥಳೀಯ ಆಸ್ಪತ್ರೆ ಹಾಗೂ ಬೆಂಗಳೂರು, ಪಾವಗಡ, ಹಿಂದೂಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗಸ್ಟ್ 14 ಮತ್ತು 15ರಂದು ಪಾವಗಡ ತಾಲೂಕಿನ ನಾಗೇನಹಳ್ಳಿ ತಾಂಡಾದಲ್ಲಿ ಮದುವೆ ನಡೆದಿತ್ತು. ಮರು ದಿನ ಆಗಸ್ಟ್ 16ರಂದು ಶ್ರೀರಂಗಪುರ ತಾಂಡಾದಲ್ಲಿ ಬೀಗರ ಊಟ ಆಯೋಜಿಸಲಾಗಿತ್ತು. ಊಟ ಮಾಡಿ ವಾಪಸ್ ತೆರಳಿದ ನಾಗೇನಹಳ್ಳಿ ತಾಂಡಾದ ಜನರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.
24 ಮಂದಿಗೆ ಕಾರ್ಯಕ್ರಮ ನಡೆದ ದಿನದಿಂದ ವಾಂತಿ, ಭೇದಿಯಾಗಿ ಅಸ್ವಸ್ಥರಾಗಿದ್ದಾರೆ. ಕಳ್ಳಬಟ್ಟಿ ಸೇವನೆಯಿಂದಲೇ ಹೀಗಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅಸ್ವಸ್ಥಗೊಂಡವರು ಹೊಟ್ಟೆ ನೋವು, ಭೇದಿಯಾಗಿ ಶುಕ್ರವಾರ ರಾತ್ರಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗೇನಹಳ್ಳಿ ತಾಂಡಾಗೆ ಉಪವಿಭಾಗಧಿಕಾರಿ ತಹಶೀಲ್ದಾರ್, ಇಓ, ಟಿಹೆಚ್ಒ ಸೇರಿದಂತೆ ಹಲವು ಅಧಿಕಾರಿಗಳ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದದೆ. ಸದ್ಯ ಕಾರ್ಯಕ್ರಮದಲ್ಲಿ ನೀಡಿದ ನೀರು, ಊಟದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದು, ತನಿಖೆ ಮುಂದುವರಿದಿದೆ.