ಹಡಪದ ಅಪ್ಪಣ್ಣನವರು ನಿಜಸುಖಿಗಳು : ಸಿದ್ಧರಾಮ ಶ್ರೀಗಳು

0
2701st Shivanubhava Program of Lingayat Progressive Association
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕಾಯಕ, ದಾಸೋಹ, ಸಮಾನತೆ ಬಸವಾದಿ ಶಿವಶರಣರ ಸಿದ್ಧಾಂತಗಳು. ಶರಣ ಹಡಪದ ಅಪ್ಪಣ್ಣನವರು ಲಿಂಗಾನುಭಾವಿಗಳಾಗಿದ್ದರು. ಲಿಂಗಾಂಗ ಸಾಮರಸ್ಯದಲ್ಲಿ ಸಿಗುವ ಸುಖವನ್ನು ನಿತ್ಯವೂ ಅನುಭವಿಸಿ ನಿಜಸುಖಿಗಳಾಗಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2701ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹಡಪದ ಅಪ್ಪಣ್ಣನವರು ಬಸವಣ್ಣನವರ ಪ್ರೀತಿಗೆ ಪಾತ್ರರಾಗಿದ್ದರು. ಅಪ್ಪಣ್ಣನವರು ಅನುಭಾವಿಗಳು, ತತ್ವವನ್ನು ಅರಿತವರು, ಶಿಸ್ತು, ಸೌಜನ್ಯ, ನಯ-ವಿನಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ಹಡಪದ ಅಪ್ಪಣ್ಣನವರು ಪ್ರಾರಂಭದಿಂದಲೂ ಮಹಾಮಾನವತಾವಾದಿ ಬಸವಣ್ಣನವರ ಬದುಕಿನ ರಕ್ಷಕರಾಗಿ, ಆಪ್ತ ಕಾರ್ಯದರ್ಶಿಯಾಗಿ, ಆಪ್ತ ಸಹಾಯಕರಾಗಿ, ಮಹಾಮನೆಯ ಮೇಲ್ವಿಚಾರಕರಾಗಿ ಕಾಯಕ ನಿರ್ವಹಿಸಿದ್ದಾರೆ.
ಸಾವಿರಾರು ವಚನಗಳನ್ನು ಬರೆದಿದ್ದರೂ ಕೂಡಾ ಹಡಪದ ಅಪ್ಪಣ್ಣನವರ 250 ವಚನಗಳು, ಹಡಪದ ಲಿಂಗಮ್ಮನವರ 114 ವಚನಗಳು ಲಭ್ಯವಿವೆ.
ಫ.ಗು. ಹಳಕಟ್ಟಿಯವರು ಸಂಗ್ರಹಿಸಿ, ಸಂಶೋಧಿಸಿ ಪ್ರಕಟಿಸಿದ ವಚನಸಾಹಿತ್ಯವನ್ನು ನಾಡಿನಾದ್ಯಂತ ಪ್ರವಚನದ ಮೂಲಕ ಪ್ರಚಾರ ಮಾಡಿದ ಶ್ರೇಯಸ್ಸು ಲಿಂ. ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಬಸವಾದಿ ಶಿವಶರಣರ ತತ್ವಗಳನ್ನು, ಆದರ್ಶಗಳನ್ನು, ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಶ್ರೀಗಳು ನುಡಿದರು.
ಅತಿಥಿಗಳಾಗಿ ರಾಜ್ಯ ಹಡಪದ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ವಿ.ಬಿ. ಕೊಣ್ಣೂರು, ಗದಗ-ಬೆಟಗೇರಿ ಹಡಪದ ಅಪ್ಪಣ್ಣ ಸಂಘದ ಅಧ್ಯಕ್ಷ ಟಿ.ವಾಯ್. ಹಡಪದ, ಶ್ರೀನಿವಾಸ ಬಿ.ಹಡಪದ ಭಾಗವಹಿಸಿದ್ದರು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಜಯಶ್ರೀ ಆರ್.ಮುದೇನಗುಡಿ, ವಚನ ಚಿಂತನೆಯನ್ನು ಸೃಷ್ಟಿ ಎನ್.ಹಿರೇಮಠ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಮಂಜುನಾಥ ಹೂವಪ್ಪ ಗಜಾಕೋಶ, ಬಸವರಾಜ ಹಡಪದ, ಬಸವರಾಜ ತೋಟಪ್ಪ ಹಡಪದ ಅವರನ್ನು ಪೂಜ್ಯರು ಸಂಮಾನಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.
ನಿಜಸುಖಿ ಶರಣ ಹಡಪದ ಅಪ್ಪಣ್ಣ ಕುರಿತು ಶ್ರೀ ಗುರುಬಸವ ಮಂಟಪ ಟ್ರಸ್ಟ್ ಹುಬ್ಬಳ್ಳಿಯ ಸಂಚಾಲಕ ಶಶಿಧರ ಕರವೀರಶೆಟ್ರ ಉಪನ್ಯಾಸ ನೀಡಿ, ಹಡಪದ ಅಪ್ಪಣ್ಣನವರಿಗೆ ಲಿಂಗತತ್ವ ಬದುಕಿನ ಜೀವಾಳವಾಗಿತ್ತು. ಇಡೀ ಬದುಕು ಲಿಂಗಮಯವಾಗಿತ್ತು. ಲಿಂಗತತ್ವದಲ್ಲಿ ನಿಜವಾದ ಸುಖವನ್ನು ಕಂಡಂತಹ ಅಪ್ಪಣ್ಣನವರು ನಿಜಸುಖಿಗಳಾಗಿದ್ದರು. ಅಪ್ಪಣ್ಣನವರ ಪುಣ್ಯಸ್ತ್ರೀ ಹಡಪದ ಲಿಂಗಮ್ಮನವರು ಸಹಿತ ಅಪ್ರತಿಮ ಶರಣೆಯಾಗಿದ್ದರು. ಹಡಪದ ಅಪ್ಪಣ್ಣನವರ ಜೀವನಾದರ್ಶಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಮಾತನಾಡಿದರು. 

Spread the love
Advertisement

LEAVE A REPLY

Please enter your comment!
Please enter your name here