ವಿಜಯಸಾಕ್ಷಿ ಸುದ್ದಿ, ಗದಗ : ಬಸವಾದಿ ಶರಣರ ವಚನ ಸಾಹಿತ್ಯ ಬಹಳ ಮೌಲಿಕವಾಗಿದೆ. ಬಸವಾದಿ ಶಿವಶರಣರ ವಚನಗಳನ್ನು ಮತ್ತು ಜೀವನ ಚರಿತ್ರೆಯನ್ನು ಓದಿದಾಗ ಶರಣರು ಸಮೃದ್ಧಿಗಿಂತಲೂ, ಸಂತೃಪ್ತಿಗೆ ವಿಶೇಷವಾದ ಮಹತ್ವ ಕೊಟ್ಟಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2703ನೇ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವಚನ ಸಾಹಿತ್ಯದಲ್ಲಿ ಮೌಲ್ಯಗಳು, ಆದರ್ಶಗಳು, ತತ್ವಗಳು ಬಹಳ ಅಮೂಲ್ಯವಾಗಿರುವುದರಿಂದ ವಚನ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದ ಗೌರವ ಪ್ರಾಪ್ತವಾಗಿದೆ. ವಚನ ಸಾಹಿತ್ಯವನ್ನು ಬೇರೆ ಬೇರೆ ದೇಶಗಳಲ್ಲಿರುವ ಜನರು ಕೂಡಾ ತಮ್ಮ ತಮ್ಮ ಭಾಷೆಯಲ್ಲಿ ಓದುತ್ತಿದ್ದಾರೆ ಎಂದರು.
ವನ್ಯಜೀವಿ ಸಂರಕ್ಷಣೆಗಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದ ಕಪ್ಪತ್ತಗುಡ್ಡ ವಲಯದ ಅರಣ್ಯಾಧಿಕಾರಿ ವೀರೇಂದ್ರ ಸೋಮಶೇಖರ ಮರಿಬಸವಣ್ಣವರ ಅವರನ್ನು ಪೂಜ್ಯರು ಸಂಮಾನಿಸಿದರು. ಎಸ್.ಎ. ಪಾಟೀಲ ಮಾತನಾಡಿದರು.
ಮೃತ್ಯಂಜಯ ಹಿರೇಮಠ ಮತ್ತು ಗುರುನಾಥ ಸುತಾರ ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಅನ್ನಪೂರ್ಣ ಎಸ್.ವರವಿ, ವಚನ ಚಿಂತನೆಯನ್ನು ನಿರ್ಮಲಾ ಜಿ.ಪಾಟೀಲ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿದ್ದ ಎಸ್.ಎ. ಪಾಟೀಲ, ವಿ.ಎ. ಪಾಟೀಲ ಹಾಗೂ ಜಿ.ಎ. ಪಾಟೀಲ ಮತ್ತು ಕುಟುಂಬದ ಸದಸ್ಯರನ್ನು ಸಂಮಾನಿಸಲಾಯಿತು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.
‘ಶರಣ ಮಾರ್ಗ’ ವಿಷಯದ ಕುರಿತು ಅಥಣಿಯ ಡಾ. ಸಿದ್ಧಣ್ಣ ಉತ್ನಾಳ ಉಪನ್ಯಾಸ ನೀಡಿ, 12ನೇ ಶತಮಾನದ ಬಸವಾದಿ ಶಿವಶರಣರು ಕಾಯಕ ಮತ್ತು ದಾಸೋಹ ಸಿದ್ಧಾಂತವನ್ನು ಸಾರಿದ್ದಾರೆ. ಪ್ರತಿಯೊಬ್ಬರೂ ಸತ್ಯಶುದ್ಧ ಕಾಯಕ ಮತ್ತು ದಾಸೋಹ ಮಾಡಬೇಕು. 12ನೇ ಶತಮಾನ ವಚನ ಸಾಹಿತ್ಯದ ಆರಂಭ. ನಂತರ ವಚನ ಸಾಹಿತ್ಯಕ್ಕೆ ಪ್ರಖರವಾದ ಶಕ್ತಿಯನ್ನು ತುಂಬಿದವರು 15ನೇ ಶತಮಾನದ ತೋಂಟದ ಸಿದ್ಧಲಿಂಗ ಯತಿಗಳು. ಪ್ರಗತಿಪರ, ಜನಪರ, ಸಮಾಜಪರ ಒಲವು ಇವು ವಚನಸಾಹಿತ್ಯದ ಮೂಲ ಕೊಡುಗೆಗಳು ಎಂದರು.