ವಿಜಯಸಾಕ್ಷಿ ಸುದ್ದಿ, ಗದಗ : ಶರಣ ಸಂಸ್ಕೃತಿಯಲ್ಲಿ ಸ್ತ್ರೀ-ಪುರುಷ ಎಂಬ ಭೇದಭಾವವಿಲ್ಲ. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಸಮಾನತೆ ಮತ್ತು ಸನ್ಮಾರ್ಗದಲ್ಲಿ ಬದುಕಲು ಬಸವಾದಿ ಶಿವಶರಣರ ತತ್ತ್ವಸಿದ್ಧಾಂತಗಳು, ಮೌಲ್ಯಗಳು ಬಹಳ ಮುಖ್ಯ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2706ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಸವಾದಿ ಶಿವಶರಣರ ತತ್ತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡು ಜೀವನದುದ್ದಕ್ಕೂ ಬದುಕಿ ನಾಡಿನಾದ್ಯಂತ ಪ್ರಸಾರ ಮಾಡಿದ ಶ್ರೇಯಸ್ಸು ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಶಿವಾನುಭವದ ಮೂಲಕ ಸಾಹಿತ್ಯ, ಶಿಕ್ಷಣ, ಕಲೆ, ಸಂಸ್ಕೃತಿ, ಸಂಗೀತ, ಪುಸ್ತಕ ಪ್ರಕಟಣೆ, ಉಪನ್ಯಾಸ ಹೀಗೆ ಹತ್ತು ಹಲವು ವೈವಿಧ್ಯಮಯ ಕಾಯಕ್ರಮಗಳನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಶ್ರೀಗಳವರ ಬದುಕು, ಆಚಾರ-ವಿಚಾರಗಳು ಇಂದಿಗೂ ಅನುಕರಣೀಯ ಎಂದು ಶ್ರೀಗಳು ಸ್ಮರಿಸಿದರು.
ಶಿವಾನುಭವ ಕಾರ್ಯಕ್ರಮದಲ್ಲಿ ಪೂಜ್ಯ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪಟ್ಟಾಧಿಕಾರ ಸುವರ್ಣ ಮಹೋತ್ಸವದಂಗವಾಗಿ ಉಪನ್ಯಾಸ ಮತ್ತು ಲಿಂ. ಮುದಕನಗೌಡ ಭ.ಪಾಟೀಲ ಇವರ 53ನೇ ಸ್ಮರಣೋತ್ಸವ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ 2024-25ನೇ ಸಾಲಿನ ಪದಾಧಿಕಾರಿಗಳ ಸೇವಾದೀಕ್ಷಾ ಕಾರ್ಯಕ್ರಮ ಜರುಗಿತು. ಗಿರಿಜಕ್ಕ ಧರ್ಮರೆಡ್ಡಿ ಪ್ರವಚನ ನೀಡಿದರು. ಶಾಲಿನಿ ದೊಡ್ಡಮನಿ ಉಪಸ್ಥತರಿದ್ದರು.
ಅಧೀಕ್ಷಕ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್.ವಿ. ಬುಗಟಿ ಮತ್ತು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿದ್ಧರಾಮೇಶ ಪಟ್ಟೇದ ಅವರನ್ನು ಸಂಮಾನಿಸಲಾಯಿತು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗಡಿಗರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ನೇತ್ರಾ ಸವಡಿ, ವಚನ ಚಿಂತನೆಯನ್ನು, ಪೂಜಾ ಸುರೇಶ ನಿಲೂಗಲ್ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಗೈದ ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರನ್ನು ಪೂಜ್ಯರು ಸಂಮಾನಿಸಿದರು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.
‘ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸಮಾಜೋಧಾರ್ಮಿಕ ಕಾರ್ಯಗಳು’ ಕುರಿತು ಪ್ರೊ. ಎಸ್.ಎಸ್. ಹರ್ಲಾಪೂರ ಅಣ್ಣಿಗೇರಿ ಉಪನ್ಯಾಸ ನೀಡಿ, ಧರ್ಮ ಅನ್ನುವುದು ಆಚರಣೆಯಲ್ಲಿ ಇದೆ. ಶರಣರು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ತಿಳಿಸಿದ್ದಾರೆ. ಹಾಗೆಯೇ ಧರ್ಮದ ವ್ಯಾಖ್ಯಾನವನ್ನು ವಚನಗಳ ಹಿನ್ನೆಲೆಯಲ್ಲಿ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಕನಸು ಸಮಾನತೆ ಹೊಂದಿದ ಸುಂದರ ಸಮಾಜ ನಿರ್ಮಾಣ ಆಗಿತ್ತು. ಜಾತಿ-ಮತ-ಪಂಥ ಭೇದಗಳನ್ನು ಸರಿಸಿ ಸರ್ವಸಮುದಾಯಗಳಿಗೂ ಶ್ರೀಮಠದ ಮಹಾದ್ವಾರವನ್ನು ಮುಕ್ತವಾಗಿರಿಸಿ ಶ್ರೀಮಠವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದರು. ಶಿವಾನುಭವ ವೇದಿಕೆಯ ಮೂಲಕ ನಾಡಿನ ಅನೇಕ ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸಿ, ಜನಗಳ ಮನಸ್ಸನ್ನು ಕಟ್ಟುವ ಕೆಲಸವನ್ನು ಮಾಡಿದ ಮೊಟ್ಟಮೊದಲ ಸ್ವಾಮಿಗಳು ಎಂದರು.