ವಿಜಯಸಾಕ್ಷಿ ಸುದ್ದಿ, ಗದಗ : ಕಪ್ಪತಗುಡ್ಡ ಅಪರೂಪದ ಆಯುರ್ವೇದ ಔಷಧಿಯ ಸಸ್ಯಗಳಿಂದ ತುಂಬಿರುವ ಖಜಾನೆ. ಕಪ್ಪತ್ತಗುಡ್ಡ ಹಚ್ಚುಹಸಿರಿನಿಂದ ಕಂಗೊಳಿಸುತ್ತಿದ್ದು, ನಾಡಿನ ಮೂಲೆಮೂಲೆಗಳಿಂದ ಪ್ರವಾಸಿಗರು ಆಗಮಿಸಿ ಕಪ್ಪತ್ತಗುಡ್ಡದ ಸೊಬಗನ್ನು ಆನಂದಿಸುತ್ತಿದ್ದಾರೆ. ಪರಿಶುದ್ಧ ಗಾಳಿಯನ್ನು ಹೊಂದಿರುವ ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2707ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಶ್ರಮದ ಫಲವಾಗಿ ಇಂದು ಕಪ್ಪತ್ತಗುಡ್ಡ ಉಳಿದಿದೆ, ವನ್ಯಜೀವಿಧಾಮವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಕಪ್ಪತ್ತಗುಡ್ಡದ ಉಳಿವಿಗಾಗಿ ಜನರನ್ನು, ಪರಿಸರವಾದಿಗಳನ್ನು, ಅನೇಕ ಸಂಘ-ಸಂಸ್ಥೆಗಳನ್ನು, ಶಾಲಾ-ಕಾಲೇಜುಗಳನ್ನು ಸಂಘಟಿಸಿ ಹೋರಾಟ ಮಾಡಿದ್ದಾರೆ. ಅನೇಕ ಆಯುರ್ವೇದ ಪಂಡಿತರು ವನಸ್ಪತಿಗಾಗಿ ಕಪ್ಪತ್ತಗುಡ್ಡ ಅರಸಿ ಬರುತ್ತಾರೆ. ಅಪಾರ ಖನಿಜ ಸಂಪತ್ತನ್ನು, ಆಯುರ್ವೇದ ಸಂಪತ್ತನ್ನು, ವನ್ಯಜೀವಿಗಳನ್ನು ಹೊಂದಿರುವ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ನಡೆಯದಂತೆ ಶ್ರೀಗಳು ಮುನ್ನೆಚ್ಚರಿಕೆ ವಹಿಸುತ್ತಾ ಬಂದಿದ್ದಾರೆ. ಕಪ್ಪತ್ತಗುಡ್ಡದ ಅಭಿವೃದ್ಧಿಗೆ ಸರಕಾರ ಕ್ರಮಕೈಕೊಳ್ಳಬೇಕು ಮತ್ತು ಈ ಭಾಗದ ಸಚಿವರು, ಶಾಸಕರು, ನಾಯಕರು ವಿಶೇಷ ಆಸಕ್ತಿ ವಹಿಸಬೇಕೆಂದು ಶ್ರೀಗಳು ಆಗ್ರಹಿಸಿದರು.
ಪ್ರೊ. ಸಿ.ಎಸ್. ಅರಸನಾಳ ಉಪನ್ಯಾಸ ನೀಡಿ, ಕಪ್ಪತ್ತಗುಡ್ಡ ಸಂರಕ್ಷಣೆಯಲ್ಲಿ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಪಾತ್ರ ಹಿರಿದು. ಗಿಡಮರಗಳನ್ನು ಕಡಿಯುವುದು, ಬೆಂಕಿ ಹಚ್ಚುವುದು, ಗಣಿಗಾರಿಕೆ ಹೀಗೆ ಅನೇಕ ಸಂಕಷ್ಟಗಳ ಸಂದರ್ಭದಲ್ಲಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಕಪ್ಪತ್ತಗುಡ್ಡ ಅಪಾರ ಗಿಡಮೂಲಿಕೆ ಮತ್ತು ಖನಿಜ ಸಂಪತ್ತನ್ನು ಒಳಗೊಂಡಿದೆ. ಮೇಲಾಗಿ ಈ ಭಾಗದ ಜನರ ಜೀವನಾಡಿ, ಸಹ್ಯಾದ್ರಿ ಎನಿಸಿದೆ. ಪೋಸ್ಕೋ ಸೇರಿದಂತೆ ಅನೇಕ ಗಣಿಗಾರಿಕೆ ಕಂಪನಿಗಳು ಕಪ್ಪತ್ತಗುಡ್ಡದ ಮೇಲೆ ಕಣ್ಣು ಹಾಕಿದಾಗ ಶ್ರೀಗಳು ರಕ್ಷಾಕವಚದಂತೆ ಕಪ್ಪತ್ತಗುಡ್ಡವನ್ನು ಉಳಿಸಿದ್ದಾರೆ.
ಮಾಜಿ ಸಚಿವ ಎಸ್.ಎಸ್. ಪಾಟೀಲ ಉಪಸ್ಥಿತರಿದ್ದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗಡಿಗರು ವಚನ ಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಖುಷಿ ಎಂ. ಲಕ್ಕುಂಡಿ, ವಚನ ಚಿಂತನೆಯನ್ನು ವರ್ಷಾ ಆರ್.ಮೇಟಿ ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಗೈದ ಲಲಿತಾ ಕಾ.ಪಾಟೀಲ, ಕೊರ್ಲಹಳ್ಳಿ ಮತ್ತು ಚನ್ನಬಸಯ್ಯ ಶಿ.ಕನಕೇರಿಮಠ, ಗಿರಿಜಾದೇವಿ ಚ.ಕನಕೇರಿಮಠ ಹಾಗೂ ಕುಟುಂಬವರ್ಗದವರನ್ನು ಪೂಜ್ಯರು ಸಂಮಾನಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಸ್ವಾಗತಿಸಿದರು. ಐ.ಬಿ. ಬೆನಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರಮನ್ ಐ.ಬಿ. ಬೆನಕೊಪ್ಪ, ಸಹಚೇರಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.
ಸ್ವತಃ ಕಪ್ಪತ್ತಗುಡ್ಡ ಪರಿಸರದಲ್ಲಿ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಲಕ್ಷಾಂತರ ಗಿಡಮರಗಳನ್ನು ಬೆಳೆಸಲು ಮೂಲಕರ್ತರಾಗಿದ್ದಾರೆ. ಕಪ್ಪತ್ತಗುಡ್ಡ ಇಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಲ್ಲದೆ, ಪರಿಶುದ್ಧ ಗಾಳಿಯನ್ನು ಹೊಂದಿದ ಪ್ರದೇಶ ಎಂಬ ಗರಿಯನ್ನು ತನ್ನದಾಗಿಸಿಕೊಂಡಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಪರಿಸರ ಪ್ರೇಮ, ಕಾಳಜಿ, ಹೋರಾಟದ ಫಲವೇ ಕಪ್ಪತ್ತಗುಡ್ಡದ ಉಳಿವಿಗೆ ಕಾರಣ ಎಂದು ಪ್ರೊ. ಸಿ.ಎಸ್. ಅರಸನಾಳ ಸ್ಮರಿಸಿದರು.