ಪುಸ್ತಕ ಸಂಸ್ಕೃತಿ ಬೆಳೆಯಬೇಕು : ಡಾ. ತೋಂಟದ ಸಿದ್ದರಾಮ ಶ್ರೀಗಳು

0
2708th Shivanubhava Program of Lingayat Progressive Association
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪುಸ್ತಕದ ಬಗ್ಗೆ ಬಹಳಷ್ಟು ಪ್ರೀತಿ ಮತ್ತು ಅಭಿಮಾನ ಇದ್ದ ಕಾರಣ ಪುಸ್ತಕದ ಸ್ವಾಮೀಜಿ, ಕನ್ನಡದ ಸ್ವಾಮೀಜಿ ಎಂದೇ ಪ್ರಸಿದ್ಧರಾಗಿದ್ದರು. ಅವರು 650ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪುಸ್ತಕ ಸಂಸ್ಕೃತಿ ಬೆಳೆಯಬೇಕು, ಓದದುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ನುಡಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ 2708ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಗುರುಗಳಾದ ಲಿಂಗೈಕ್ಯ ಡಾ. ತೊಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಅನ್ನ ದಾಸೋಹ, ಜ್ಞಾನ ದಾಸೋಹ, ಪುಸ್ತಕ ದಾಸೋಹದ ಜೊತೆಗೆ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಸೇವೆ ಅನನ್ಯ ಮತ್ತು ಅನುಪಮವಾದುದು.

ಒಂದು ವಿಶ್ವವಿದ್ಯಾಲಯಕ್ಕಿಂತಲೂ ಹೆಚ್ಚಿನ ಪುಸ್ತಕಗಳು ಶ್ರೀಮಠದ ಪ್ರಕಾಶನ ಸಂಸ್ಥೆಯಿಂದ ಮುದ್ರಣಗೊಂಡಿವೆ. ಶ್ರೀಮಠದ ಪ್ರಕಾಶನ ಸಂಸ್ಥೆ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿಗೆ ಭಾಜನವಾಗಿದೆ.
ಶ್ರೀಗಳು `ಗೃಹಸ್ಥರ ಮನೆಯಲ್ಲಿ ಪುತ್ರೋತ್ಸವ, ಮಠಗಳಲ್ಲಿ ಪುಸ್ತಕೋತ್ಸವ’ ಎಂದು ಹೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳು ಪ್ರತಿವರ್ಷ ಶ್ರೀಮಠದಿಂದ 15ರಿಂದ 20 ಪುಸ್ತಕಗಳ ಪ್ರಕಟಣೆ ಮಾಡುತ್ತಿದ್ದರು. ಪುಸ್ತಕಗಳು ಮಕ್ಕಳ ಸಂಸ್ಕೃತಿಯ ಪ್ರತೀಕ. ಪಾಲಕರು ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಬೇಕು ಎಂದು ಶ್ರೀಗಳು ನುಡಿದರು.

‘ಶಿವಶರಣೆಯರ ವಚನಾನುಭವ’ ಕುರಿತು ಶರಣೆ ಗಿರಿಜಕ್ಕ ಧರ್ಮರೆಡ್ಡಿ ಪ್ರವಚನ ನೀಡಿದರು. ದಾಸೋಹ ಸೇವೆಯನ್ನು ಡಾವಣಗೇರಿಯ ಶಾಂತರಾಜು ಮಾಗನೂರ, ಗದುಗಿನ ಶರಣ ಶಂಕರ್ ಚಳ್ಳಮರದ ವಹಿಸಿಕೊಂಡಿದ್ದರು. ಧರ್ಮಗಂಥ ಪಠಣವನ್ನು ಶ್ರೇಯಾ ಜೆ.ಬಡಿಗೇರ, ವಚನ ಚಿಂತನೆಯನ್ನು ಪ್ರತೀಕ್ಷಾ ಜೆ.ಬಡಿಗೇರ ಮಾಡಿದರು. ವಚನ ಸಂಗೀತವನ್ನು ಅಶೋಕ್ ಸುತಾರ ಹಾಗೂ ಗುರುನಾಥ್ ಸುತಾರ ನೆಡೆಸಿಕೊಟ್ಟರು.

ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಸ್ವಾಗತಿಸಿದರು. ಐ.ಬಿ. ಬೆನಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರಮನ್ ಐ.ಬಿ. ಬೆನಕೊಪ್ಪ, ಶಿವಾನುಭವ ಸಮಿತಿ ಸಹ ಚೇರಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.

‘ತೋಂಟದಾರ್ಯ ಮಠದ ಗ್ರಂಥ ಪ್ರಕಟಣೆಗಳು’ ವಿಷಯವಾಗಿ ಧಾರವಾಡದ ಜಿ.ಎಂ. ಹೆಗಡೆಯವರು ಉಪನ್ಯಾಸ ನೀಡಿ, ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ಸಾಮಾನ್ಯರ ಸ್ವಾಮಿಜಿಯಾಗಿ, ಕನ್ನಡದ ಸ್ವಾಮಿಜಿಯಾಗಿ, ಕೋಮು ಸೌಹಾರ್ದತೆಯ ಹರಿಕಾರರಾಗಿ ಕನ್ನಡ ನಾಡು-ನುಡಿಗೆ, ಗಢಿಭಾಗಕ್ಕೆ, ಪರಿಸರಕ್ಕೆ, ಸಮಾಜದ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಶ್ರೀಮಠದಿಂದ ನಾಡಿನ ಸಾಧಕರ, ಮಹನೀಯರ, ಪುಣ್ಯಪುರುಷರ ಕುರಿತಾದ ಅನೇಕ ಮೌಲಿಕ ಕೃತಿಗಳು ಮುದ್ರಣಗೊಂಡಿವೆ. ಶ್ರೀಗಳ ಪುಸ್ತಕ ಪ್ರೀತಿಯ ಕಾರಣವಾಗಿ ನಾಡಿನ ತುಂಬ ಪುಸ್ತಕದ ಸ್ವಾಮೀಜಿ ಎಂಬ ಅಭಿದಾನಕ್ಕೆ ಪಾತ್ರಾಗಿದ್ದರು ಎಂದರು.


Spread the love

LEAVE A REPLY

Please enter your comment!
Please enter your name here