ವಿಜಯಸಾಕ್ಷಿ ಸುದ್ದಿ, ಗದಗ : ನಾಡಿನ ಪ್ರಖ್ಯಾತ ಸಂಶೋಧಕರಾದ ಡಾ. ಎಂ.ಎಂ. ಕಲಬುರ್ಗಿಯವರು ಪರಿಶ್ರಮಿಗಳು ಹಾಗೂ ಪ್ರತಿಭಾನ್ವಿತರು ಆಗಿದ್ದರು. ಕನ್ನಡ ನಾಡಿನಲ್ಲಿ ಅನೇಕ ಸಾಹಿತಿಗಳನ್ನು, ವಿದ್ಯಾರ್ಥಿಗಳನ್ನು ಸಂಶೋಧಕರನ್ನಾಗಿ ರೂಪಿಸುವಲ್ಲಿ ಕಲಬುರ್ಗಿಯವರ ಪಾತ್ರ ಮಹತ್ವದ್ದಾಗಿದೆ. ಕನ್ನಡಕ್ಕೆ, ಲಿಂಗಾಯತ ಧರ್ಮಕ್ಕೆ, ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು ಎಂದು ಪೂಜ್ಯ ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2713ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ಡಾ. ಎಂ.ಎಂ. ಕಲಬುರ್ಗಿಯವರು ತಮ್ಮ ಬದುಕಿನುದ್ದಕ್ಕೂ ಸಂಶೋಧನೆ, ಕನ್ನಡ ಹಾಗೂ ಬಸವಣ್ಣನನ್ನು ಉಸಿರಾಗಿಸಿಕೊಂಡಿದ್ದರು. ಗದಗ ಮತ್ತು ನಾಗನೂರು ಮಠದ ಪ್ರಕಾಶನ ಸಂಸ್ಥೆಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಕರ್ನಾಟಕದಲ್ಲಿ ಹುಟ್ಟಿದ ಏಕೈಕ ಧರ್ಮ ಲಿಂಗಾಯತ ಧರ್ಮ. ಡಾ. ಫ.ಗು. ಹಳಕಟ್ಟಿ, ಆರ್.ಸಿ. ಹಿರೇಮಠ, ಹಾಗೂ ಎಂ.ಎಂ. ಕಲಬುರ್ಗಿಯವರು ಸಂಶೋಧನಾಪೂರ್ವಕವಾಗಿ ವಚನಸಾಹಿತ್ಯವನ್ನು ಸಂಗ್ರಹಿಸಿ, ಸಂಶೋಧಿಸಿ, ಶರಣಸಾಹಿತ್ಯವನ್ನು ಉಳಿಸಿ ಬೆಳೆಸಿದ್ದಾರೆ ಎಂದರು.
ಯೋಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದ ಸುಧಾ ಪಾಟೀಲ ಅವರ ಯೋಗ ಸಾಧನೆ ಮೆಚ್ಚುವಂತಹದ್ದು. ಯೋಗ ದರ್ಶನವು ತುಂಬಾ ಮಹತ್ವದ್ದು. ಭಾರತದ ಯೋಗ ಪದ್ಧತಿಯನ್ನು ಇಡೀ ವಿಶ್ವವೇ ಅನುಸರಿಸುತ್ತಿದೆ. ಯೋಗ ದೈಹಿಕ, ಮಾನಸಿಕ ಶಕ್ತಿ ತುಂಬುವ ಕೆಲಸ ಮಾಡುತ್ತದೆ ಎಂದರು.
ಪಿ.ಜಿ ಡಿಪ್ಲೋಮಾ ಇನ್ ಯೋಗ ಸ್ಟಡೀಸ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ ಸುಧಾ ಪಾಟೀಲ ಇವರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಇವರಿಂದ ವಚನ ಸಂಗೀತ ನಡೆಯಿತು. ಧರ್ಮಗ್ರಂಥ ಪಠಣವನ್ನು ಕುಸುಮಾ ಬಿ.ಇಟಗಿ ಹಾಗೂ ವಚನ ಚಿಂತನವನ್ನು ಮಲ್ಲಿಕಾರ್ಜುನ ಬಿ.ಇಟಗಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಡಾ. ಎಸ್.ಎಸ್. ಮಹಾದೇವಿ ಸಾ.ಹುಬ್ಬಳ್ಳಿ ಹಾಗೂ ಸೋಮಶೇಖರ ಶಿವಪ್ಪ ಅನೂರಶಟ್ರ ಸಾ. ಹಾವೇರಿ ಇವರು ವಹಿಸಿದ್ದರು.
ಶಿವಾನಂದ ಹೊಂಬಳ ಸ್ವಾಗತಿಸಿದರು. ವಿದ್ಯಾವತಿ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರಮನ್ ಐ.ಬಿ. ಬೆನಕೊಪ್ಪ ಉಪಸ್ಥಿತರಿದ್ದರು.
ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಶಿವಪ್ಪ ಕುರಿಯವರು ಡಾ. ಎಂ.ಎಂ. ಕಲಬುರ್ಗಿಯವರ ಸಂಸ್ಮರಣೆ ಕುರಿತು ಮಾತನಾಡುತ್ತ, ದಕ್ಷಿಣದಲ್ಲಿ ಚಿದಾನಂದಮೂರ್ತಿಯವರಿದ್ದಂತೆ ಉತ್ತರಕರ್ನಾಟಕದಲ್ಲಿ ಎಂ.ಎಂ. ಕಲಬುರ್ಗಿಯವರು ಇದ್ದರು. ಪ್ರತಿಯೊಂದನ್ನೂ ಸಂಶೋಧನೆಗೆ ಒಳಪಡಿಸಿ, ಜನರಿಗೆ ತಿಳಿಸುವ ಕೆಲಸ ಮಾಡಿದರು. ಲಿಂಗಾಯತ, ವಚನಸಾಹಿತ್ಯ, ಬಸವಣ್ಣನವರ ಕುರಿತು ವಿಶೇಷ ಸಂಶೋಧನೆ ಅವರದಾಗಿತ್ತು. ವಿಶ್ವವಿದ್ಯಾಲಯದಲ್ಲಿ ಅವರು ಪಂಪಭಾರತ ಪಾಠ ಮಾಡುವುದನ್ನು ನೆನಪಿಸಿಕೊಂಡರು. ಅವರ ಸಂಶೋಧನೆಯ ಪ್ರವೃತ್ತಿ ಕಾವ್ಯಕ್ಕಿಂತಲೂ ಹೆಚ್ಚಿತ್ತು. ಅವರ ಮುಖ್ಯ ಕ್ಷೇತ್ರವೇ ಸಂಶೋಧನೆಯಾಗಿತ್ತು ಎಂದರು.