ಕನ್ನಡ ಕಟ್ಟುವ ಕೆಲಸವಾಗಬೇಕು : ಡಾ. ತೋಂಟದ ಸಿದ್ದರಾಮ ಶ್ರೀಗಳು

0
2718th Shivanubhava program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡ ನಾಡು-ನುಡಿಗೆ ಲಿಂಗಾಯತ ಧರ್ಮದ ಕೊಡುಗೆ ಅಪಾರ. ಕನ್ನಡ ಭಾಷೆ ದುಂಡು ದುಂಡಾದ ಭಾಷೆ. ವಚನಕಾರರು ಕನ್ನಡ ಭಾಷೆಯಲ್ಲಿಯೇ ವಚನಗಳನ್ನು ರಚಿಸಿದ್ದಾರೆ. ಲಿಂಗಾಯತ ಧರ್ಮ ಮತ್ತು ಕನ್ನಡದ ಬೆಳವಣಿಗೆಗೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾದುದು ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

Advertisement

2718ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕನ್ನಡ ಭಾಷೆ 2000 ವರ್ಷಗಳ ಇತಿಹಾಸ ಹೊಂದಿದೆ. ಪಂಪ ಕನ್ನಡದ ಆದಿಕವಿಯಾದರೆ, ಅಕ್ಕಮಹಾದೇವಿ ಆದಿಕವಿಯಿತ್ರಿ.

ಮೊದಲಿದ್ದ ಮುಂಬೈ ಕರ್ನಾಟಕ ಈಗ ಕಿತ್ತೂರು ಕರ್ನಾಟಕವಾಗಿದೆ. ಏಕೀಕರಣದ ಹೊರಾಟದಿಂದ ಕನ್ನಡ ಭಾಷೆಯನ್ನು ಆಡುವ ಪ್ರದೇಶವನ್ನು ಕರ್ನಾಟಕವೆಂದು ನಾಮಕರಣ ಮಾಡಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದುಗೂಡಿಸಿದರು. ಮರಾಠಿಮಯವಾಗಿದ್ದ ಕನ್ನಡ ಪ್ರದೇಶದಲ್ಲಿ ಡೆಪ್ಯುಟಿ ಚನ್ನಬಸಪ್ಪನವರು ಕನ್ನಡ ಶಾಲೆಗಳನ್ನು ತೆರೆದು ಕನ್ನಡ ಭಾಷೆಯನ್ನು ಉಳಿಸಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೇಕು, ಗಡಿನಾಡು ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕನ್ನಡ ಕಟ್ಟುವ ಕೆಲಸವಾಗಬೇಕು. ಕನ್ನಡಕ್ಕಾಗಿ ಹೋರಾಡಿದ ದಿಗ್ಗಜರನ್ನು ಸ್ಮರಿಸಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಜಿ.ಬಿ. ಬೀಡನಾಳರನ್ನು ಸನ್ಮಾನಿಸಲಾಯಿತು. ಸುವರ್ಣ ಸಂಭ್ರಮ ವಿಶೇಷ ಪ್ರಶಸ್ತಿ ಪುರಸ್ಕೃತರಾದ ಜಾನಪದ ಕಲಾವಿದ ಸುರೇಶ ಠಾಕರಪ್ಪ ಲಮಾಣಿಯವರನ್ನು ಸನ್ಮಾನಿಸಲಾಯಿತು.

ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನೆರವೇರಿಸಿದರು. ಧರ್ಮಗ್ರಂಥ ಪಠಣವನ್ನು ಸೌಜನ್ಯ ಎಸ್.ಹಳ್ಳಿಕೇರಿ, ವಚನ ಚಿಂತನವನ್ನು ಛಾಯಾ ಜಿ.ಜಂಗಮನಿ ನಡೆಸಿಕೊಟ್ಟರು.

ದಾಸೋಹ ಸೇವೆಯನ್ನು ಕನಕಶ್ರೀ ಮೆಡಿಕಲ್ ಸ್ಟೋರ್‌ನ ಶರಣ ಕರಿಯಪ್ಪ ಸಿದ್ದಲಿಂಗಪ್ಪ ಜಂಗಳಿ ವಹಿಸಿಕೊಂಡಿದ್ದರು. ಶಿವಾನುಭವ ಸಮಿತಿಯ ಚೆರಮನ್ ಐ.ಬಿ. ಬೆನಕೊಪ್ಪ ಸಂಮಾನಿತರನ್ನು ಪರಿಚಯಿಸಿದರೆ, ಉಪಾಧ್ಯಕ್ಷರಾದ ಡಾ. ಉಮೇಶ ಪುರದವರು ಕಾರ್ಯಕ್ರಮ ನಿರೂಪಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸದಸ್ಯರಾದ ಸೋಮಶೇಖರ ಪುರಾಣಿಕ, ವಿದ್ಯಾ ಗಂಜಿಹಾಳ, ಮಹೇಶ್ ಗಾಣಿಗೇರ, ನಾಗರಾಜ್ ಹಿರೇಮಠ, ಬಸವರಾಜ ಕಾಡಪ್ಪನವರು ಹಾಗೂ ಶಿವಾನಂದ ಹೊಂಬಳವರು ಮತ್ತು ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರವರು ಉಪಸ್ಥಿತರಿದ್ದರು.

ಪರಮಪೂಜ್ಯ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು ವಿಶೇಷ ಕನ್ನಡ ತಿಂಗಳಿನ ಕಾರ್ಯಕ್ರಮವನ್ನು ವಿನೂತನವಾಗಿ ತಂತ್ರಾಂಶ ಬಳಸಿಕೊಂಡು ರಿಮೋಟ್ ಡಿವೈಸ್ ಉಪಯೋಗಿಸಿ ಉದ್ಘಾಟಿಸಿದರು. ಉಪನ್ಯಾಸಕರಾಗಿ ಆಗಮಿಸಿದ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸಿದ್ಧಲಿಂಗೇಶ್ವರ ಹಲಸೂರು ತೋಂಟದಾರ್ಯ ಮಠದಲ್ಲಿ ನಡೆದ ನವೆಂಬರ್ ತಿಂಗಳ ವಿಶೇಷ ಶಿವಾನುಭವ ಕಾರ್ಯಕ್ರಮದಲ್ಲಿ ಕನ್ನಡದ ದಿಗ್ಗಜರು ವಿಷಯ ಕುರಿತು ಹಳಗನ್ನಡ, ನಡುಗನ್ನಡ, ಹಾಗೂ ಹೊಸಗನ್ನಡ ಸಾಹಿತಿಗಳ, ಕವಿಗಳ, ಸಾಹಿತ್ಯ ಕುರಿತು ಮಾತನಾಡಿದರು.


Spread the love

LEAVE A REPLY

Please enter your comment!
Please enter your name here