ಬೆಂಗಳೂರು: ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಭಾರೀ ಚಿನ್ನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕುಮಾರ್ ಮೇಲೆಯೇ ಕಳ್ಳತನದ ಆರೋಪ ಕೇಳಿ ಬಂದಿದ್ದು, ಸುಮಾರು 4 ಕೋಟಿ ರೂ. ಮೌಲ್ಯದ 2,783 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಬ್ಯಾಂಕ್ ಲಾಕರ್ ಕೀ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಬಳಿ ಇದ್ದ ಕಾರಣ, ಮ್ಯಾನೇಜರ್ ಅನುಪಸ್ಥಿತಿಯಲ್ಲಿ ಸ್ವಲ್ಪಸ್ವಲ್ಪವಾಗಿ ಚಿನ್ನ ಕದಿಯಲಾಗಿತ್ತು ಎಂದು ಹೇಳಲಾಗಿದೆ. ಜನವರಿ 2ರಂದು ಗ್ರಾಹಕರು ತಮ್ಮ ಅಡವಿಟ್ಟ ಚಿನ್ನ ಪಡೆಯಲು ಬಂದಾಗ ಲಾಕರ್ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಒಟ್ಟು 21 ಪ್ಯಾಕೇಟ್‌ಗಳಲ್ಲಿ ಕೆಲವು ಚಿನ್ನಾಭರಣ ಹಾಗೂ 3 ಪ್ಯಾಕೇಟ್‌ಗಳಲ್ಲಿ ಸಂಪೂರ್ಣ ಚಿನ್ನ ಕಾಣೆಯಾಗಿರುವುದು ಪತ್ತೆಯಾಗಿದೆ. ಆಂತರಿಕ ವಿಚಾರಣೆಯಲ್ಲಿ ಕಿರಣ್ ಕುಮಾರ್ ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕದ್ದ ಚಿನ್ನವನ್ನು ಬೇರೆ ಬೇರೆ ಅಂಗಡಿಗಳಲ್ಲಿ ಗಿರವಿ ಇಟ್ಟು ಪಡೆದ ಹಣವನ್ನು ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಬಳಸಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈಗಾಗಲೇ 700 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಉಳಿದ ಚಿನ್ನ ಪತ್ತೆ ಮತ್ತು ಹೆಚ್ಚಿನ ತನಿಖೆ ಮುಂದುವರಿದಿದೆ.



