ವಿಜಯಸಾಕ್ಷಿ ಸುದ್ದಿ, ಡಂಬಳ : ಹೊಸ ಪರಿವರ್ತನೆಗೆ ಸಾಕ್ಷಿಯಾಗುವ ಮೂಲಕ ಪ್ರಸಿದ್ಧವಾಗಿರುವ ಡಂಬಳದ ತೋಂಟದ ಡಾ.ಸಿದ್ದರಾಮ ಸ್ವಾಮಿಗಳ 284ನೇ ವರ್ಷದ ಮಹಾರಥೋತ್ಸವ ಶನಿವಾರ ಸಾಯಂಕಾಲ ಮಘಾ ನಕ್ಷತ್ರದಲ್ಲಿ ಸಾವಿರಾರು ಭಕ್ತರ ಜಯಘೋಷದೊಂದಿಗೆ ನೆರವೇರಿತು.
ತೇರಿನ ಮುಂದೆ ಸಿದ್ದಲಿಂಗೇಶ್ವರರು ರಚಿಸಿದ ಷಟ್‌ಸ್ಥಲ ಜ್ಞಾನ ಸಾರಾಮೃತ ಹಾಗೂ ತಾಳೆಗರಿಯಲ್ಲಿ ರಚಿಸಿದ ವಚನ ಕಟ್ಟುಗಳನ್ನು ಇರಿಸಿದ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು. 20ನೇ ನೂತನ ಪೀಠಾಧಿಪತಿಗಾಳದ ತೋಂಟದ ಡಾ. ಸಿದ್ದರಾಮ ಸ್ವಾಮಿಗಳು ತೇರಿನ ಮುಂದೆ ಪಾದಚಾರಿಯಾಗಿ ಸಾಗುವ ಮೂಲಕ ಚಾಲನೆ ನೀಡಿದರು.
ಅಣ್ಣಿಗೇರಿ ಕರಡಿ ಮೇಳ, ಜಾಂಜ್ ಮೇಳ, ಡೊಳ್ಳು ಕುಣಿತ, ವಾದ್ಯಮೇಳ ವೈಭವಗಳಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥ ಸಾಗಿತು. ಗದಗ, ಮುಂಡರಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು. ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ, ಧಾರವಾಡ ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ, ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ, ಎಮ್.ಎಸ್. ಅಂಗಡಿ, ಜಿ.ವಿ. ಹಿರೇಮಠ ಜಾತ್ರಾ ಕಮಿಟಿ ಅಧ್ಯಕ್ಷ ಬಸವರಾಜ ಹಮ್ಮಿಗಿ, ಉಪಾಧ್ಯಕ್ಷ ಭೀಮಪ್ಪ ಗದಗಿನ, ಕಾರ್ಯದರ್ಶಿ ಅಶೋಕ ಮಾನೆ, ಖಜಾಂಚಿ ಮಲ್ಲಣ್ಣ ರೇವಡಿ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಂಡು ಭಕ್ತಿ ಮೆರೆದರು.
ಮಹಾರಥೋತ್ಸವದ ನಿಮಿತ್ತ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.