ಚನ್ನವೀರ ಶರಣರು ಪವಾಡ ಪುರುಷರು

0
balaganuru jatre
Spread the love

ವಿಜಯಸಾಕ್ಷಿ ಸುದ್ದಿ, ಗದಗ : ೧೨ನೇ ಶತಮಾನದ ನಂತರ ನಲತ್ವಾಡಮಠ ಶರಣರಲ್ಲಿ ಚಿಕೇನಕೊಪ್ಪದ ಚನ್ನವೀರಶರಣು ಅಗ್ರಗಣ್ಯ ಸ್ವಾಮೀಜಿಗಳಾಗಿದ್ದರು ಎಂದು ಶಿರಹಟ್ಟಿ-ಬಾಲೆಹೊಸೂರ ಸಂಸ್ಥಾನಮಠದ ಪೂಜ್ಯಶ್ರೀ ಜ.ಫಕೀರ ದಿಂಗಾಲೇಶ್ವರ ಶ್ರೀಗಳು ನುಡಿದರು.

Advertisement

ಅವರು ತಾಲೂಕಿನ ಸುಕ್ಷೇತ್ರ ಬಳಗಾನೂರ ಗ್ರಾಮದಲ್ಲಿ ಶುಕ್ರವಾರ ಜರುಗಿದ ಮೌನಯೋಗಿ ಚಿಕೇನಕೊಪ್ಪ ಶ್ರೀ ಚನ್ನವೀರಶರಣರ ೨೯ನೇ ಪುಣ್ಯಸ್ಮರಣೋತ್ಸವ, ಸಾಮೂಹಿಕ ವಿವಾಹ ಹಾಗೂ ಜಾತ್ರಾಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠಗಳು ಸಾಕಷ್ಟಿವೆ. ಆದರೆ, ತಮ್ಮದೇ ದಾರಿಯಲ್ಲಿ ಮಠಗಳನ್ನು ಕಟ್ಟಿ ಶಿಕ್ಷಣ, ದಾಸೋಹ ಹಾಗೂ ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಅಂದಿನ ಹಾಗೂ ಇಂದಿನ ಸ್ವಾಮಿಗಳು ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದ ಶ್ರೀಗಳು, ಹಿಂದಿನ ಸ್ವಾಮೀಜಿಗಳು ಅರಾಮವಾಗಿದ್ದರು. ಆದರೆ, ಇಂದು ಮುಂದುವರೆದ ಕಾಲದಲ್ಲಿ ಸ್ವಾಮೀಜಿಗಳಾಗುವುದು ಬಹಳ ಕಷ್ಟದ ಕೆಲಸವಾಗಿದೆ ಎಂದು ಹೇಳಿದರು.

ಮದುವೆ ಎನ್ನುವದು ಭಾರತ ಬಿಟ್ಟು ಬೇರೆ ದೇಶದಲ್ಲಿ ಎರಡು ದೇಹಗಳನ್ನು ಕೂಡಿಸುವದಾಗಿದೆ. ಆದರೆ, ಭಾರತದ ಶರಣರ ದೃಷ್ಟಿಯಲ್ಲಿ ಎರಡು ಜೀವಿಗಳನ್ನು ಕೂಡಿಸುವುದಾಗಿದೆ. ಅಂತಹ ಕಾರ್ಯವನ್ನು ಬಳಗಾನೂರಿನ ಶ್ರೀಮಠದಿಂದ ನಿರಂತರವಾಗಿ ಮಾಡುತ್ತಿದ್ದಾರೆ. ಗಂಡಸರಾದವರು ವರದಕ್ಷಿಣೆ ತೆಗೆದುಕೊಳ್ಳದೆ ಮದುವೆ ಆಗಬೇಕು. ತಂದೆ-ತಾಯಿ ಆಸ್ತಿಯಲ್ಲಿ ಪಾಲು ಕೇಳುವವನು ಗಂಡಸು ಅಲ್ಲ, ತಾನೇ ದುಡಿದದ್ದನ್ನು ತಿನ್ನುವನು ಗಂಡಸು. ಗಂಡಸರು ಮನಸ್ಸಿನ ನೆಮ್ಮದಿಗಾಗಿ ದುಡಿಯಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಚಿಕ್ಕಮಲ್ಲಿಗವಾಡದ ಶ್ರೀ ಆಶ್ರಮದ ಪೂಜ್ಯಶ್ರೀ ಎ.ಪಿ. ಪಾಟೀಲ ಗುರೂಜಿ ಮಾತನಾಡಿ, ಗೃಹಸ್ಥಾಶ್ರಮ ಬಹಳ ಸೂಕ್ಷ್ಮ ಜೀವನವಾಗಿದೆ. ಪೂಜ್ಯರ ನುಡಿಯೊಳಗೆ ಶಬ್ದದ ಅರ್ಥವಿರುತ್ತದೆ. ಅದನ್ನು ಬರಿ ಕಿವಿಯಿಂದ ಕೇಳಿದರೆ ಸಾಲದು. ಸತ್ಸಂಗವನ್ನು ಅನುಭವ ಪಡೆದು, ಅನುಷ್ಟಾನಕ್ಕೆ ತರಬೇಕು. ದೇಹ ಹಾಗೂ ಮನಸ್ಸನ್ನು ಅರ್ಥ ಮಾಡಿಕೊಳ್ಳದವರು ಜೀವನದಲ್ಲಿ ಏನೂ ಅರ್ಥ ಮಾಡಿಕೊಳ್ಳವದಿಲ್ಲ. ಮಠಾದೀಶರಾದಿಯಾಗಿ ಎಲ್ಲರೂ ಗೃಹಸ್ಥಾಶ್ರಮದಿಂದ ಬಂದವರಾಗಿದ್ದಾರೆ ಎಂದು ಹೇಳಿದರು.

ವೇದಿಕೆ ಮೇಲೆ ಬಳಗಾನೂರಿನ ಶಿವಶಾಂತವೀರ ಶರಣರು, ಹೊಸಳ್ಳಿಯ ಪೂಜ್ಯಶ್ರೀ ಅಭಿನವ ಬೂದೀಶ್ವರ ಶ್ರೀಗಳು, ಕುಂದಗೋಳ ಕಲ್ಯಾಣಮಠದ ಪೂಜ್ಯಶ್ರೀ ಅಭಿನವ ಬಸವಣ್ಣನವರು, ಯುವ ಮುಖಂಡ ಉಮೇಶಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ೪೨ ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರಟಗಿಯ ಕುಮಾರ ಸಂಜಯ ಜೆ.ಸಿ. ಹಾಗೂ ಬಳ್ಳಾರಿಯ ದಿ ಎಸ್.ಕೆ.ಆರ್ ಜಿಲಾನಿ ಭಾಷಾ ಅವರಿಗೆ `ಶರಣಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಭಕ್ತರಿಂದ ಶಿವಶಾಂತವೀರ ಶರಣರಿಗೆ ತುಲಾಭಾರ ಸೇವೆ, ರಕ್ತದಾನ ಶಿಬಿರ ಜರುಗಿದವು. ಬೆಂಗಳೂರಿನ ಮಹೇಶಕುಮಾರ ಹೇರೂರ ಸಂಗೀತ ಕಾರ್ಯಕ್ರಮ ನೀಡಿದರು. ಶಿವಲಿಂಗಯ್ಯಶಾಸ್ತ್ರೀ ಹಿರೇಮಠ ಸಿದ್ದಾಪೂರ ಕಾರ್ಯಕ್ರಮ ನಿರೂಪಿಸಿದರು. ಬಿ.ವೈ. ಡೊಳ್ಳಿನ ವಂದಿಸಿದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಮಾತನಾಡಿ, ಕಲ್ಲಿಗೆ ಸಂಸ್ಕಾರ ಕೊಟ್ಟು ನೀರು ಹಾಕಿದಾಗ ಹೂವಾಗಿ ಅರಳುವಂತೆ ಚನ್ನವೀರ ಶರಣರು ಭಕ್ತರಿಗೆ ಜೀವನದ ಮಾರ್ಗದರ್ಶನವನ್ನು ಮಾಡಿದ್ದಾರೆ. ದಾನಿಗಳು ಕೊಟ್ಟ ದೇಣಿಗೆಯಿಂದ ಶಿಕ್ಷಣ, ದಾಸೋಹ ಹಾಗೂ ಸಾಮೂಹಿಕ ಮದುವೆಗಳನ್ನು ಮಾಡಿ ಸಮಾಜದ ಹಣವನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here