ವಿಜಯಸಾಕ್ಷಿ ಸುದ್ದಿ, ಧಾರವಾಡ : ಅತಿಯಾದ ಮಳೆಯಿಂದಾಗಿ, ಮುಂಗಾರಿನ ಫಸಲು ಕೊಯ್ಲು ಹಂತದಲ್ಲಿ ನಾಶವಾಗಿದ್ದು, ಹಿಂಗಾರು ಬಿತ್ತನೆ ಮಾಡಿದ್ದ ಬೀಜಗಳು ಕೊಚ್ಚಿಕೊಂಡು ಹೋಗಿ ನಾಟಿ ಬಂದಿಲ್ಲ. ಆದ್ದರಿಂದ ಈಗಾಗಲೇ ಕೃಷಿ ಇಲಾಖೆಯಿಂದ ಹಿಂಗಾರು ಬಿತ್ತನೆಗೆ ಬೀಜ ಪಡೆದಿದ್ದ ರೈತರಿಗೆ ಮರಳಿ ರಿಯಾತಿಯಲ್ಲಿ ಬಿತ್ತನೆ ಬೀಜ ವಿತರಿಸಲು ಅಗತ್ಯವಿರುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ತಿಳಿಸಿದರು.
ಅವರು ಮಂಗಳವಾರ ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ 2024-25ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ 2ನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನೇಕ ಇಲಾಖೆಗಳು ತಮಗೆ ನಿಗದಿಪಡಿಸಿದ ಆರ್ಥಿಕ ಮತ್ತು ಭೌತಿಕ ಗುರಿಯನ್ನು ತಲುಪಿದ್ದು, ಇದು ಉತ್ತಮ ಪ್ರಗತಿಯಾಗಿದೆ. ಇನ್ನೂ ಕೆಲವು ಇಲಾಖೆಗಳು ಪ್ರಗತಿಯಲ್ಲಿ ಹಿಂದುಳಿದಿದ್ದು, ಅವರು ಸಹ ನಿಗದಿತ ಗುರಿ ಸಾಧಿಸಬೇಕೆಂದು ಸಚಿವ ಸಂತೋಷ ಲಾಡ್ ಹೇಳಿದರು.
ಅಕ್ಟೋಬರ್ 1ರಿಂದ 14ರವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಸುಮಾರು 25 ಸಾವಿರ ಹೆಕ್ಟೆಡಿಜಿ ಬೆಳೆ ನಾಶವಾಗಿದ್ದು, ಅಕ್ಟೋಬರ್ 14ರ ನಂತರದ ನಿರಂತರ ಮಳೆಗೆ ಮತ್ತೆ ಬೆಳೆ ಹಾನಿ, ಬಿತ್ತನೆ ಹಾನಿ ಆಗಿದೆ. ಈ ಕುರಿತು ಸರಿಯಾದ ಸಮೀಕ್ಷೆ ಮಾಡಿ, ಸೂಕ್ತ ವರದಿ ಸಲ್ಲಿಸಬೇಕೆಂದು ಸಚಿವರು ಸೂಚಿಸಿದರಲ್ಲದೆ, ಮಳೆ ಹಾನಿ ಸಂದರ್ಭದಲ್ಲಿ ಮನೆ, ಜಮೀನು, ರಸ್ತೆ ಸೇತುವೆ, ಕಟ್ಟಡಗಳನ್ನು ಪರಿಶೀಲಿಸಿ ಸ್ಪಂದಿಸಬೇಕು.
ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಮಳೆ ನಿರಂತರವಾಗಿರುವದರಿಂದ ಬೆಳೆ ಹಾನಿ ಹೆಚ್ಚಾಗಿದೆ.
ಹಿಂಗಾರಿಗಾಗಿ ಬಿತ್ತಿದ್ದ ಬೀಜಗಳು ಕೊಚ್ಚಿ ಹೋಗಿವೆ. ಇವುಗಳ ಮರು ಸಮೀಕ್ಷೆ ಆಗಬೇಕು. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಜಮೀನುಗಳಿಗೆ ತಪ್ಪದೇ ಭೇಟಿ ನೀಡಿ, ನಿಖರವಾಗಿ ಹಾನಿ ದಾಖಲಿಸಬೇಕೆಂದು ಹೇಳಿದರು.
ಶಾಸಕ ಅಬ್ಬಯ್ಯ ಪ್ರಸಾದ ಮಾತನಾಡಿ, ಮಹಾನಗರದಲ್ಲಿ ನೀರು ಸರಬರಾಜು ಸುಧಾರಿಸಬೇಕು. ಸರಕಾರಿ ಉಪಯೋಗಕ್ಕಾಗಿ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಬೇಕು. ಬಹಳಷ್ಟು ಸರಕಾರಿ ಯೋಜನೆಗಳಿಗೆ, ಗೃಹ ನಿರ್ಮಾಣಕ್ಕಾಗಿ ಜಮೀನು ಅಗತ್ಯವಿದೆ. ಆರೋಗ್ಯ ಇಲಾಖೆ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಮಳೆ ಹಾನಿಯಿಂದ ಮನೆಗಳಿಗೆ, ರಸ್ತೆಗಳಿಗೆ ಹಾನಿಯಾಗಿದೆ. ಕೊಯ್ಲಿಗೆ ಬಂದಿದ್ದ ಈರುಳ್ಳಿ, ಹತ್ತಿ, ಶೇಂಗಾ, ಗೋವಿನ ಜೋಳ ಸೇರಿದಂತೆ ವಿವಿಧ ರೀತಿಯ ಬೆಳೆ ಹಾನಿ ಆಗಿದೆ.
ಅಕ್ಟೋಬರ್ 14ರವರೆಗಿನ ಮಳೆಗೆ ಅಂದಾಜು 25 ಸಾವಿರ ಹೆಕ್ಟೆರ್ ಬೆಳೆ ನಾಶವಾದ ವರದಿ ಇತ್ತು. ಈಗಲೂ ಮಳೆ ಮುಂದುವರೆದಿರುವದರಿಂದ ಬೆಳೆಹಾನಿ ಮರು ಸಮೀಕ್ಷೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ರಾಜ್ಯ ಪ್ರಾಧಿಕಾರದ ಉಪಾಧ್ಯಕ್ಷ ಆರ್.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ವೇದಿಕೆಯಲ್ಲಿ ಇದ್ದರು. ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿ, ವಂದಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, 2024-25ನೇ ಸಾಲಿಗೆ ಧಾರವಾಡ ಜಿಲ್ಲಾ ಪಂಚಾಯತಿಗೆ ರೂ.1411 ಕೋಟಿ ಅನುದಾನ ಹಂಚಿಕೆ ಆಗಿತ್ತು. ಸೆಪ್ಟೆಂಬರ್ವರೆಗೆ ರೂ.701 ಕೋಟಿ ಅನುದಾನ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿರುವ ಅನುದಾನದಲ್ಲಿ ರೂ.657 ಕೋಟಿ ವೆಚ್ಚವಾಗಿದ್ದು, ಶೇ.93ರಷ್ಟು ಪ್ರಗತಿ ಆಗಿದೆ. 35,084,26 ವಯಕ್ತಿಕ ಮತ್ತು ಸಮುದಾಯಿಕ ಕಾಮಗಾರಿಗಳ ವಾರ್ಷಿಕ ಭೌತಿಕ ಗುರಿ ಹೊಂದಲಾಗಿತ್ತು, ಇದರಲ್ಲಿ 31,144 ಕಾಮಗಾರಿಗಳನ್ನು ಪೂರ್ಣಗೊಳಿಸಿ, ಶೇ.88.77ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.