ವಿಜಯಸಾಕ್ಷಿ ಸುದ್ದಿ, ಗದಗ : ಮಡಿಕೆ ತಯಾರಿಸಲು ಕುಂಬಾರನಿಗೆ ಮೊದಲು ಮಣ್ಣು ಬೇಕು. ಉತ್ತಮ ಒಡವೆ (ಆಭರಣ)ಗಳನ್ನು ತಯಾರಿಸಲು ಅಕ್ಕಸಾಲಿಗನಿಗೆ ಚೊಕ್ಕ ಬಂಗಾರ ಬೇಕಾಗಿರುವಂತೆ ಶಿವ (ದೇವರು)ನನ್ನು ಕಾಣಲು ಮೊದಲು ಗುರುವಿನ ಉಪದೇಶ (ಮಾರ್ಗದರ್ಶನ) ಬೇಕು. ನಾವೆಲ್ಲ ಭಾವಿಸಿರುವಂತೆ ಶಿವ ಎಂದರೆ ಗುಡಿಯಲ್ಲಿರುವ ಮೂರ್ತಿ, ಚಿತ್ರಪಟದಲ್ಲಿರುವ ಚಿತ್ರ ಅಥವಾ ಕೈಲಾಸದಲ್ಲಿರುವ ಪರಮೇಶ್ವರ ಅಲ್ಲ. `ಶಿವ’ ಎಂದರೆ ಶ್ರೇಷ್ಠ, ಒಳ್ಳೆಯ, ಮಂಗಲ, ಶುಭ, ದಿವ್ಯಶಕ್ತಿ, ಜ್ಯೋತಿ ಸ್ವರೂಪ ಎಂದರ್ಥ. ಈ ಶಬ್ದಗಳ ಗುಣಾಂಶಗಳು ನಮ್ಮಲ್ಲಿ ಜಾಗೃತವಾಗಲು ಗುರುವಿನ ಮಾರ್ಗದರ್ಶನ ಮತ್ತು ಕೃಪೆ ಬೇಕು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್.ಎ. ಮುಗದ ನುಡಿದರು.
ಎಸ್‌ವಾಯ್‌ಬಿಎಂಎಸ್ ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಗದಗ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಇವುಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ (ಬಸಪ್ರಭೆ ಕ್ಯಾಂಪಸ್)ದಲ್ಲಿ ನಡೆದ 2ನೇ ಶ್ರಾವಣ ಸೋಮವಾರದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಭಿಕರ ಪರವಾಗಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಬಿ. ಗ್ಸಡರ, ಇಂದು ವಯಕ್ತಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಇನ್ನಿತರೆ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಗುರುಗಳ ಪಾತ್ರ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮದ ಮಂಗಲೋತ್ಸವದ ಪ್ರಯುಕ್ತ ನಡೆಸುವ ವಚನ ಕಂಠಪಾಠ ಸ್ಪರ್ಧೆಯ ಮಾಹಿತಿ ಪತ್ರಿಕೆಗಳನ್ನು ಡಾ. ಎಸ್.ಕೆ. ನಾಲತ್ವಾಡಮಠ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ, ಡಾ. ಎಂ.ವಿ. ಐಹೊಳ್ಳಿ, ದಾಸೋಹ ಸೇವಾಕರ್ತೆ ಅರುಣಾ ಇಂಗಳಳ್ಳಿ ಉಪಸ್ಥಿತರಿದ್ದರು. ಡಾ. ಎ.ಡಿ. ಹುಳಪಲ್ಲೇ, ಬಿ.ಬಿ. ತೋಟಗೇರ, ಎಸ್.ಎನ್. ಹಕಾರೆ, ಅಂದಾನೆಪ್ಪ ಕೆಂಭಾವಿ, ರಾಜೇಶ ಯಲಿಗಾರ, ಜಯಶ್ರೀ ಡಾವಣಗೇರಿ, ವರ್ಷಾ ಹಡಗಲಿ, ವೀಣಾ ಗೌಡರ, ಗಿರಿಜಾ ಅಂಗಡಿ, ಸುನಂದಾ ಜ್ಯಾನೋಪಂತರ ಮತ್ತು ಓಣಿಯ ಹಿರಿಯರು ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಡಾ. ಎಂ.ವಿ. ಐಹೊಳ್ಳಿ ಸಾಮೂಹಿಕ ಬಸವ ಪ್ರಾರ್ಥನೆ ಹೇಳಿದರು. ಸುಲೋಚನಾ ಐಹೊಳ್ಳಿ ವಚನ ಪಠಣ ಮಾಡಿದರು, ಪುಷ್ಪಾ ಕರಕಿಕಟ್ಟಿ ವಚನ ಸಂಗೀತ ಹೇಳಿದರು. ವಿಜಯಾ ಚನ್ನಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿ.ಎಂ. ಮುಂದಿನಮನಿ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮಿ ಆನೆಹೊಸೂರು ಮಾತನಾಡಿ, ಬಸವಣ್ಣನವರು ಸ್ತ್ರೀಯರಿಗೆ ಹೆಚ್ಚಿನ ಆದ್ಯತೆ ನೀಡಿ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದವರಲ್ಲಿ ಮೊದಲಿರು. ಅಂತೆಯೇ ಇಂದು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ನಮ್ಮ ಬದುಕಿನ ಅನೇಕ ಕಾರ್ಯಗಳು ಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತವೆ. `ಹರಮುನಿದರೂ ಗುರು ಕಾಯುವ’ ಎಂಬ ಮಾತಿನಲ್ಲಿ ಸತ್ಯಾಂಶವಿದೆ. ನಮ್ಮ ಶ್ರೇಯಸ್ಸಿಗೆ ಯಾರೇ ಮಾರ್ಗದರ್ಶನ ಮಾಡಿದರೂ ಅವರು ನಮ್ಮ ಗುರುಗಳಾಗುತ್ತಾರೆ ಎಂದರು.