ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ ನಡೆಸಿದ್ದ ಆರೋಪಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕಟ್ ಮಾಡುವ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದಾನೆ.
ಬಳಿಕ ಸುಮಾರು ಆರು ತಿಂಗಳು ಸ್ಕೆಚ್ ಹಾಕಿ ಒಂದೇ ಬಾರಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕದ ಜ್ಯುಡಿಷಿಯಲ್ ಲೇಔಟ್‌ನಲ್ಲಿ ಈ ಕಳ್ಳತನ ನಡೆದಿತ್ತು. ಮನೆ ಮಾಲೀಕರು ಅಮೆರಿಕದಲ್ಲಿ ನೆಲೆಸಿದ್ದು, ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಮಾತ್ರ ಬೆಂಗಳೂರಿನ ಮನೆಗೆ ಬರುತ್ತಿದ್ದರು.
ಈ ನಡುವೆ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಲಾರಾಮ್ ಮೂರು ಬಾರಿ ಮನೆಯ ಮೇಲ್ಚಾವಣಿಗೆ ಹೋಗಿ ಸ್ಲೈಡ್ ಡೋರ್ ತೆರೆಯುವ ಮೂಲಕ ರೆಕ್ಕಿ ನಡೆಸಿದ್ದ. ನಂತರ ಮನೆ ಒಳಗೆ ಪ್ರವೇಶಿಸಿ ಲಾಕರ್ ತೆರೆಯಿಸಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ 1.8 ಕೆಜಿ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಹಣ ಕಳ್ಳತನ ಮಾಡಿದ್ದಾನೆ.
ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕಿದ್ದರಿಂದ ಯಾರಿಗೂ ತಿಳಿಸದೆ ಚಿನ್ನಾಭರಣವನ್ನು ರಾಜಸ್ಥಾನಕ್ಕೆ ಕೊಂಡೊಯ್ದು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ನಡುವೆ ಮನೆಯ ಸಿಸಿಟಿವಿ ದೃಶ್ಯಗಳನ್ನು ಅಮೆರಿಕದಲ್ಲಿದ್ದ ದಂಪತಿ ಮೊಬೈಲ್‌ನಲ್ಲಿ ಪರಿಶೀಲಿಸಿದ ವೇಳೆ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಸಂಬಂಧಿಕರ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಯಲಹಂಕ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿ ವೇಲಾರಾಮ್ ಅನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.



