ಕಾರವಾರ:- ಸರಿಸುಮಾರು 46 ವರ್ಷಗಳಿಂದ ಎಣ್ಣೆ, ಬತ್ತಿ ಇಲ್ಲದೇ ಉರಿಯುತ್ತಿದ್ದ ಪ್ರತಿಷ್ಠಿತ ದೀಪನಾಥೇಶ್ವರ ದೇವಾಲಯದ ಮೂರಕ್ಕೆ ಮೂರು ದೀಪಗಳು ಆರಿ ಹೋಗಿವೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ದೀಪಗಳು ಆರಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ.
ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದದಲ್ಲಿ ಮೂರು ದೀಪಗಳು ಯಾವುದೇ ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಅಂದರೆ 4 ದಶಕದಿಂದಲೂ ಉರಿಯುತ್ತಿದ್ದವು. ಆದರೆ ಏನಾಯಿತೋ ಏನೋ ಗೊತ್ತಿಲ್ಲ. ಎಲ್ಲ ದೀಪಗಳು ಒಮ್ಮೆಗೆ ಆರಿ ಹೋಗಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ದೀಪಗಳು ಇದ್ದಾಗ ನಿತ್ಯ ಜನರು, ಇವುಗಳನ್ನು ನೋಡಲೆಂದೇ ದೇವಾಲಯಕ್ಕೆ ಬರುತ್ತಿದ್ದರು.
ಚಿಗಳ್ಳಿ ಗ್ರಾಮದ ದೈವಜ್ಞ ಶಾರದಮ್ಮ ಎನ್ನುವರು 1979ರಲ್ಲಿ ಸೀಮೆ ಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಆದರೆ ಅದು ಒಂದು ದಿನ ಕಳೆದರೂ ಆರಿಲಿಲ್ಲ. ನಿರಂತರವಾಗಿ ಉರಿಯತೊಡಗಿತು. ಇದರಿಂದ ಕುತೂಹಲಗೊಂಡ ಶಾರದಮ್ಮ, ಒಂದು ವರ್ಷದವರೆಗೆ ಕಾಯ್ದು ಮತ್ತೊಂದು ದೀಪವನ್ನು 1980ರಲ್ಲಿ ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯ ತೊಡಗಿತು.
2ನೇ ದೀಪ ಹಚ್ಚಿದ 10-15 ದಿನಗಳ ನಂತರ ಮತ್ತೊಂದು 3ನೇ ದೀಪ ಬೆಳಗಿಸಿದರು. ಪವಾಡ ಎಂಬಂತೆ 3ನೇ ದೀಪ ಸೇರಿ ಮೂರು ದೀಪಗಳು ನಿರಂತರವಾಗಿ ಉರಿಯ ತೊಡಗಿದವು. ಅಂದಿನಿಂದ ಅಂದರೆ 1979ರಿಂದ 2025ರ ಫೆಬ್ರುವರಿವರೆಗೆ ನಿರಂತರವಾಗಿ ಉರಿದುಕೊಂಡು ಬಂದಿದ್ದ ದೀಪಗಳು ಈಗ ಏಕಾಏಕಿ ಆರಿ ಹೋಗಿರುವುದು ಭಕ್ತರಲ್ಲಿ ಬೇಸರ ತರಿಸಿದೆ. ದೇವರು ಮುನಿದನಾ ಎಂದು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.