ಹಿಟ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ಅವರು ಐಪಿಎಲ್ ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಐಪಿಎಲ್ 2025ರ ಎಲಿಮಿನೇಟರ್ ಪಂದ್ಯ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ದಾಖಲೆಯೊಂದನ್ನು ನಿರ್ಮಿಸಿದ್ದು, ಐಪಿಎಲ್‌ನಲ್ಲಿ ಪ್ರಸ್ತುತ ಸಕ್ರಿಯ ಆಟಗಾರರಲ್ಲಿ ಬೇರೆ ಯಾವ ಆಟಗಾರನೂ ಮಾಡಲಾಗದಂತಹ ಸಾಧನೆಯನ್ನು ರೋಹಿತ್ ಶರ್ಮಾ ಮಾಡಿದ್ದಾರೆ.
ಗುಜರಾತ್ ವಿರುದ್ಧದ ಪಂದ್ಯದಲ್ಲಿ 2 ಸಿಕ್ಸರ್‌ಗಳನ್ನು ಬಾರಿಸಿದ ಹಿಟ್‌ಮ್ಯಾನ್ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ಮೊದಲ ಸಕ್ರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ವಿರಾಟ್ ಕೊಹ್ಲಿ 291 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಧೋನಿ (264) ಮತ್ತು ಆಂಡ್ರೆ ರಸೆಲ್ (223) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದ ತಕ್ಷಣ ರೋಹಿತ್ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ, ರೋಹಿತ್ ಶರ್ಮಾ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು, ಉತ್ತಮ ಫಾರ್ಮ್‌ನಲ್ಲಿರುವಂತೆ ಕಾಣುತ್ತಿದ್ದಾರೆ.
ಮತ್ತೊಂದೆಡೆ, ಒಟ್ಟಾರೆ ದಾಖಲೆಯ ಬಗ್ಗೆ ಮಾತನಾಡಿದರೆ, ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ 357 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಇದುವರೆಗೆ 300 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.