ಬೀದರ್:- ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಸಿದ್ದೇಶ್ವರ ಪೆಟ್ರೋಲ್ ಬಂಕ್ ನ 4.96ಲಕ್ಷ ಹಣವನ್ನು ಲೂಟಿ ಮಾಡಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ತನಿಖೆಯಲ್ಲಿ ಸಿಬ್ಬಂದಿಯ ಕಳ್ಳಾಟ ಬಟಾ ಬಯಲಾಗಿದೆ.
ಘಟನೆ ಸಂಬಂಧ ಐವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಣ ಲೂಟಿ ಮಾಡಲು ಆರೋಪಿಗಳು ಸಿನಿಮೀಯ ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದು, ಒಂದು ಕ್ಷಣ ಪೊಲೀಸರೇ ದಂಗಾಗಿದ್ದಾರೆ.
ಹೌದು, ಬಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಸಿದ್ದೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಜ್ಞಾನೇಶ್ವರ ಮೇತ್ರೆ ಅವರು, ಬೀದರ್‌ನ ಶಿವನಗರದ ಎಸ್‌ಬಿಐ ಬ್ಯಾಂಕ್ ಖಾತೆಗೆ ಹಣ ತುಂಬಲು ಹೋಗುತ್ತಿರುವಾಗ ಕಾರಲ್ಲಿ ಬಂದ ಅಪರಿಚಿತರು ಬೈಕ್‌ಗೆ ಡಿಕ್ಕಿ ಹೊಡೆದು ₹4.96 ಲಕ್ಷ ದೋಚಿ ಎಸ್ಕೇಪ್ ಆಗಿದ್ದರು.
ಬಳಿಕ ಹಣ ಕಳೆದುಕೊಂಡ ಪೆಟ್ರೋಲ್ ಬಂಕ್ ಸಿಬ್ಬಂದಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಆದರೆ ತನಿಖೆ ವೇಳೆ ಸಿಬ್ಬಂದಿ ಜ್ಞಾನೇಶ್ವರ ಮೇತ್ರೆ ಸ್ನೇಹಿತರ ಜೊತೆ ಕೂಡಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಧೂಮ್ ಹಿಂದಿ ಸಿನಿಮಾ ನೋಡಿ ಕಳ್ಳತನಕ್ಕೆ ಪ್ಲ್ಯಾನ್ ರೂಪಿಸಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾಹಿತಿ ನೀಡಿದ್ದಾರೆ. ಇನ್ನೂ ಬಂಧಿತರಿಂದ ಕಾರು ಹಾಗೂ ಹಣವನ್ನು ಜಪ್ತಿ ಮಾಡಲಾಗಿದೆ.
ಪ್ರಕರಣವನ್ನು ಬೇದಿಸುವಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಭಾಲ್ಕಿ ಡಿಎಸ್ಪಿ ಶಿವಾನಂದಪವಾಡಶೆಟ್ಟಿ, ಪಿಎಸ್ಐ ವಿಶ್ವಾರಾಧ್ಯ, ಸಿಪಿಐಗಳಾದ ಗುರುನಾಥ,ಶಾಮರಾವ್,ಪ್ರಶಾಂತರೆಡ್ಡಿ,ಹರ್ಷವರ್ಧನ ಶಿವಶಂಕರ ಸೇರಿ ಹಲವರ ತಂಡ ಯಶಸ್ವಿಯಾಗಿದೆ.