ಭದ್ರಾವತಿ: ತಮ್ಮದೇ ಕಚೇರಿಯ ಸಿಬ್ಬಂದಿಯಿಂದ 4 ಲಕ್ಷ ರೂ ಲಂಚ ಬೇಡಿಕೆ ಇಟ್ಟಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ 1 ಲಕ್ಷ ರೂ ಮೊದಲ ಕಂತು ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಮಧ್ಯವರ್ತಿ ಮಂಜುನಾಥ್ ಜೊತೆ ಸೇರಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ.
ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲಿಂಗರಾಜು ಅವರಿಗೆ 2011 ರಿಂದ 2023 ರವರೆಗೆ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಭತ್ಯೆಗಳ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡಲು 4 ಲಕ್ಷ ರೂ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಪೈಕಿ ಇಂದು 1 ಲಕ್ಷ ರೂ ಸ್ವೀಕರಿಸುವಾಗಲೇ ದಾಳಿ ನಡೆದಿದೆ.
ಲಿಂಗರಾಜು ಹಲವು ಬಾರಿ ಬಿಇಓ ಹಾಗೂ ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಂತರ ಖಾಸಗಿ ವ್ಯಕ್ತಿ ಮಂಜುನಾಥ್ ಮೂಲಕ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಂಜೆ ಸುಮಾರು 7 ಗಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕೊಠಡಿಯಲ್ಲಿ ಲಂಚ ಸ್ವೀಕರಿಸುವಾಗ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮಂಜುನಾಥ್ ತನ್ನನ್ನು ಆರ್‌ಟಿಐ ಕಾರ್ಯಕರ್ತ ಹಾಗೂ ಪತ್ರಕರ್ತ ಎಂದು ಹೇಳಿಕೊಂಡಿದ್ದು, ಆ ಕುರಿತು ತನಿಖೆ ಮುಂದುವರಿದಿದೆ.
ಕಾರ್ಯಾಚರಣೆ ಬಿ ಪಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯಿತು. ಪೊಲೀಸ್ ಅಧೀಕ್ಷಕ ಎಮ್ ಎಸ್ ಕೌಲಾಪೂರೆ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ವೀರಬಸಪ್ಪ ಎಲ್ ಕುಸಲಾಪುರ, ಗುರುರಾಜ್ ಎನ್ ಮೈಲಾರಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.



