ನವದೆಹಲಿ: ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಈ ಹೊಸ ಸುಂಕಗಳು ಜಿಎಸ್ಟಿ ದರಕ್ಕಿಂತ ಹೆಚ್ಚಿರಲಿದ್ದು, ಪ್ರಸ್ತುತ ಈ ಪಾಪ ಸರಕುಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್ಟಿ ಪರಿಹಾರ ಸೆಸ್ಗೆ ಬದಲಿಯಾಗಲಿವೆ.
ಫೆಬ್ರವರಿ 1ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಸಮಾನ ಉತ್ಪನ್ನಗಳಿಗೆ ಶೇ.40ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ. ಆದರೆ ಬೀಡಿಗಳ ಮೇಲೆ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನ್ವಯವಾಗಲಿದೆ ಎಂದು ಸರ್ಕಾರಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದರೊಂದಿಗೆ, ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗಲಿದ್ದು, ತಂಬಾಕು ಹಾಗೂ ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಜಾರಿಯಾಗಲಿದೆ.
ಹಣಕಾಸು ಸಚಿವಾಲಯವು ಚೂಯಿಂಗ್ ತಂಬಾಕು, ಜರ್ದಾ, ಪರಿಮಳಯುಕ್ತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳು (ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ) ನಿಯಮಗಳು–2026 ಅನ್ನು ಕೂಡ ಅಧಿಸೂಚನೆಯ ಮೂಲಕ ಪ್ರಕಟಿಸಿದೆ.
ಡಿಸೆಂಬರ್ನಲ್ಲಿ ಸಂಸತ್ತು ಪಾನ್ ಮಸಾಲಾ ತಯಾರಿಕೆ ಹಾಗೂ ತಂಬಾಕಿನ ಮೇಲಿನ ಅಬಕಾರಿ ಸುಂಕಕ್ಕೆ ಸಂಬಂಧಿಸಿದಂತೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಅಂಗೀಕರಿಸಿತ್ತು. ಈ ಸುಂಕಗಳ ಅನುಷ್ಠಾನ ದಿನಾಂಕವಾಗಿ ಫೆಬ್ರವರಿ 1ನ್ನು ಸರ್ಕಾರ ಪ್ರಕಟಿಸಿದ್ದು, ಪ್ರಸ್ತುತ ಜಾರಿಯಲ್ಲಿರುವ ಜಿಎಸ್ಟಿ ಪರಿಹಾರ ಸೆಸ್ ಫೆಬ್ರವರಿ 1ರಿಂದ ಅಸ್ತಿತ್ವದಲ್ಲಿರುವುದಿಲ್ಲ.



