ತಿರುವುಗಳನ್ನು ದಾಟಿ ಗುರಿಯತ್ತ ಸಾಗಿ : ರಂಭಾಪುರಿ ಶ್ರೀಗಳು

0
42nd Gender Harmony Commemoration Ceremony of Lim Sri Veergangadhar Jagadguru
????????????
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮೌಲ್ಯಗಳ ಉಳಿವು-ಅಳಿವು ಮಾನವನ ಆಚರಣೆಯಲ್ಲಿವೆ. ಮನುಷ್ಯ ಜೀವನ ಅತ್ಯಂತ ಪವಿತ್ರವಾದುದು. ಅರಿತು ಬಾಳುವುದರಲ್ಲಿ ಸುಖ ಶಾಂತಿಯಿದೆ. ಪ್ರತಿಯೊಬ್ಬರ ಜೀವನದಲ್ಲಿ ಗುರಿ ಇರಬೇಕೇ ಹೊರತು ಉರಿ ಇರಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಜರುಗಿದ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ 42ನೇ ವರ್ಷದ ಲಿಂಗಾಂಗ ಸಾಮರಸ್ಯದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವನದಲ್ಲಿ ಎಷ್ಟೇ ತಿರುವುಗಳು ಬಂದರೂ ತಿರುಗಿ ನೋಡದೇ ಗುರಿಯತ್ತ ಸಾಗಬೇಕು. ನದಿಗಳು ಮುಂದಕ್ಕೆ ಹರಿಯುತ್ತವೆಯೇ ಹೊರತು ಹಿಂದಕ್ಕೆ ಹರಿಯುವುದಿಲ್ಲ. ಅದೇ ರೀತಿ ಮಾನವ ಜೀವನವು ಕೂಡಾ ಕಳೆದು ಹೋದ ಬದುಕಿನ ಬಗ್ಗೆ ಚಿಂತಿಸದೇ ಮುಂದೆ ಸಾಗಬೇಕು. ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ತ್ಯಾಗ ಮಾಡಬಾರದು. ಜೀವನದಲ್ಲಿ ಗಳಿಸುವುದಾದರೆ ಮಾನವೀಯತೆ, ಪ್ರಾಮಾಣಿಕತೆ, ಗೆಳೆತನ, ಪ್ರೀತಿ-ವಿಶ್ವಾಸ ಗಳಿಸು. ಆದರೆ ಹಣ, ಆಸ್ತಿ- ಅಂತಸ್ತುಗಳನ್ನಲ್ಲ ಎಂದರು.
ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಮನುಷ್ಯನಿಗೆ ಆರೋಗ್ಯ ಮತ್ತು ಸಂತೋಷ ಎಲ್ಲ ಸಂಪತ್ತುಗಳಿಗಿಂತ ಬಹು ದೊಡ್ಡ ಸಂಪತ್ತಾಗಿವೆ. ಜೀವನದ ವಿಕಾಸ ಶ್ರೇಯೋಭಿವೃದ್ಧಿಗಾಗಿ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಕೊಟ್ಟ ಸಂದೇಶ ಉಜ್ವಲ ಭವಿಷ್ಯಕ್ಕೆ ಕಾರಣವಾಗಿವೆ ಎಂದರು.
ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ವಾಮದೇವ ಮಹಂತ ಶಿವಾಚಾರ್ಯರು ಮಾತನಾಡಿ, ಕಷ್ಟದಲ್ಲಿ ಜೊತೆಗಿದ್ದವರನ್ನು ಸುಖ ಬಂದಾಗ ಮರೆಯಬಾರದು. ಬಂಗಾರವನ್ನು ಎಷ್ಟು ಚೂರು ಮಾಡಿದರೂ ಅದರ ಬೆಲೆ ಕಡಿಮೆಯಾಗುವುದಿಲ್ಲ. ಅದೇ ರೀತಿ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಭಕ್ತರ ಬಾಳನ್ನು ಬಂಗಾರಗೊಳಿಸುವುದರಲ್ಲಿ ಸದಾ ಶ್ರಮಿಸಿದ್ದನ್ನು ಎಂದೆಂದಿಗೂ ಮರೆಯಲಾಗದು. ಅವರು ತೋರಿದ ಧರ್ಮದ ದಾರಿಯಿಂದ ನಮ್ಮೆಲ್ಲರ ಬಾಳಿಗೆ ಬೆಳಕು ದೊರಕಿದೆ ಎಂದರು.
ನೊಣವಿನಕೆರೆಯ ಡಾ. ಕರಿವೃಷಭ ಶಿವಯೋಗಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಜಿಲ್ಲೆ ಕುರುಗೋಡಿನ ಡಾ.ಶಿವರುದ್ರಗೌಡ್ರು ನಾಗನಗೌಡ್ರ ಇವರಿಗೆ `ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಪ್ರಶಸ್ತಿ’ಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿ ಶುಭ ಹಾರೈಸಿದರು.
  ಈ ಪವಿತ್ರ ಸಮಾರಂಭದಲ್ಲಿ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು, ಗಿರಿಸಾಗರ ರುದ್ರಮುನಿ ಶಿವಾಚಾರ್ಯರು, ಲಕ್ಷ್ಮೇಶ್ವರ ಕರೇವಾಡಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಬಿಲ್ವ ಕೆರೂರು ಹಿರೇಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು, ನಿಡಗುಂದಿ ರುದ್ರಮುನಿ ಶಿವಾಚಾರ್ಯರು, ಕಲಾದಗಿ ಪಂಚಗ್ರಹ ಹಿರೇಮಠದ ಗಂಗಾಧರ ಶಿವಾಚಾರ್ಯರು, ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯರು, ಕೊಡಿಯಾಲ ಹೊಸಪೇಟೆ ಪುಣ್ಯಕೋಟಿಮಠದ ಜಗದೀಶ್ವರ ಸ್ವಾಮಿಗಳು ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ಗದಗ ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ವೀರಣ್ಣ ಪವಾಡದ, ಚಂದ್ರು ಬಾಳಿಹಳ್ಳಿಮಠ, ವೀರೇಶ ಕೂಗುಮಠ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಡಾ. ಗುರುಸ್ವಾಮಿ ಕಲಕೇರಿ ಅವರಿಂದ ಭಕ್ತಿ ಗೀತೆ ಕಾರ್ಯಕ್ರಮ ಜರುಗಿತು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಮಲೆಬೆನ್ನೂರಿನ ವೀರಶೈವ ಸಮಾಜದ ಧುರೀಣರು ಅನ್ನ ದಾಸೋಹ ನೆರವೇರಿಸಿದರು.
ಸಮಾರಂಭ ಉದ್ಘಾಟಿಸಿದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಭೂಲೋಕದ ಶಿವನಂತೆ ಅವತರಿಸಿ ಮಾನವ ಧರ್ಮದ ಹಿರಿಮೆಯನ್ನು ಬೋಧಿಸಿದವರು. ವಿಶ್ವಬಂಧುತ್ವದ ಭಾವನೆಗಳನ್ನು ಬೆಳೆಸಿ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಆದರ್ಶ ಲೋಕೋದ್ಧಾರ ವಿಚಾರ ಧಾರೆ ಸಕಲರ ಬಾಳಿನಲ್ಲಿ ಬೆಳಕನ್ನು ಉಂಟು ಮಾಡುತ್ತವೆ ಎಂದು ಹರುಷ ವ್ಯಕ್ತಪಡಿಸಿದರು.
Advertisement
ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಸತ್ಯ, ಶಾಂತಿ, ಧರ್ಮ, ಸಂಸ್ಕೃತಿಗಳ ಪುನರುತ್ಥಾನಕ್ಕಾಗಿ ಸದಾ ಶ್ರಮಿಸಿದ ವಿಭೂತಿ ಪುರುಷರು. ಅವರ ವಿಶ್ವ ಬಂಧುತ್ವ, ವಿಶಾಲ ಚಿಂತನೆಗಳು ಮಾನವ ಕುಲದ ವಿಕಾಸಕ್ಕಾಗಿ ಮುಡಿಪಾಗಿದ್ದವು. ಅಗಲಿ 42 ವರ್ಷಗಳಾದರೂ ಅವರ ಆದರ್ಶ, ವಿಚಾರ ಧಾರೆಗಳು ಮಾನವ ಜನಾಂಗಕ್ಕೆ ದಾರಿ ದೀಪವಾಗಿವೆ.
– ಡಾ. ವೀರಸೋಮೇಶ್ವರ ಜಗದ್ಗುರುಗಳು.
ಶ್ರೀ ರಂಭಾಪುರಿ ಪೀಠ, ಬಾಳೆಹೊನ್ನೂರು.

Spread the love

LEAVE A REPLY

Please enter your comment!
Please enter your name here