ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದ ಸಂಸ್ಥಾಪಕರು, ಬಾಳೇಹೊನ್ನೂರು ಶ್ರೀ ರಂಭಾಪುರಿ ಪೀಠದ ಲಿಂ.ರಂ.ಜ. ಪ್ರಸನ್ನ ರೇಣುಕ ವೀರಗಂಗಾಧರ ಶಿವಾಚಾರ್ಯ ಸ್ವಾಮೀಜಿಯವರ 42ನೇ ಪುಣ್ಯಾರಾಧನಾ ಮಹೋತ್ಸವ ಅ.19ರಂದು ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಜರುಗಲಿದೆ.
ಈ ಕುರಿತು ಬುಧವಾರ ಕ್ಷೇತ್ರದ ಪಟ್ಟಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಮಾಹಿತಿ ನೀಡಿ, ಲಿಂ.ರಂ.ವೀರಗಂಗಾಧರ ಜಗದ್ಗುರುಗಳ ತಪೋಭೂಮಿ ಮುಕ್ತಿಮಂದಿರ ಧರ್ಮಕ್ಷೇತ್ರ ಈ ಭಾಗದ ಭೂಕೈಲಾಸ ಎಂದೇ ಪ್ರಸಿದ್ಧವಾಗಿದೆ.
ಬಾಳೆಹೊನ್ನೂರು ರಂಭಾಪುರಿ ಪೀಠದ ಪೀಠಾಧ್ಯಕ್ಷರಾಗಿ ನಾಡಿನಾದ್ಯಂತ ಧರ್ಮ ಪ್ರಸಾರ ಮಾಡಿದ್ದಾರೆ. ಅವರ `ಮಾನವ ಧರ್ಮಕ್ಕೆ ಜಯವಾಗಲಿ-ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ವಿಶ್ವಶಾಂತಿ ಮಂತ್ರ ಮೊಳಗಿಸಿದ ವಿಶ್ವ ಕಲ್ಯಾಣ ಯೋಗೀಶ್ವರರ 42ನೇ ಪುಣ್ಯಾರಾಧನೆಯು ಬಾಳೆಹೊನ್ನೂರು ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ.
ಅ.19ರಂದು ಪ್ರಾತಃಕಾಲ ಪಂಚಾಚಾರ್ಯ ಧ್ವಜಾರೋಹಣ, ಪೂಜಾ ಕೈಂಕರ್ಯದೊಂದಿಗೆ ಪುಣ್ಯಾರಾಧನೆ ಕಾರ್ಯಕ್ರಮಗಳು ಆರಂಭಗೊಳ್ಳುವವು. ಇದೇ ಸಂದರ್ಭದಲ್ಲಿ ಕಲಾದಗಿ ಪಂಚಗ್ರಹ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರ 9ನೇ ವರ್ಷದ ಪುಣ್ಯಸ್ಮರಣೋತ್ಸವ ನಡೆಯುವುದು. ಮಧ್ಯಾಹ್ನ 1ಕ್ಕೆ ಲಿಂ.ರಂ.ಜ. ವೀರಗಂಗಾಧರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಸಂಜೆ 4ಕ್ಕೆ ಧರ್ಮಸಭೆ ಜರುಗಲಿದೆ.
ನೊಣವಿನಕೆರೆ ಕಾಡಸಿದ್ದೇಶ್ವರಮಠದ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಬಳ್ಳಾರಿ ಜಿಲ್ಲೆ ಕುರಗೋಡಿನ ನಿವಾಸಿ ಡಾ.ಶಿವರುದ್ರಗೌಡ್ರು ನಾಡಗೌಡ್ರು ಅವರಿಗೆ ರಂಭಾಪುರಿ ಜಗದ್ಗುರು ವೀರಗಂಗಾಧರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮಕ್ಕೆ ನಾಡಿನ ಅನೇಕ ಮಠಗಳ ಮಠಾಧೀಶರು, ಹರಗುರು ಚರಮೂರ್ತಿಗಳು, ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಸಚಿವ ಎಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ. ಚಂದ್ರು ಲಮಾಣಿ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಎಸ್.ಐ. ಚಿಕ್ಕನಗೌಡ್ರ, ಕುಸುಮಾವತಿ ಶಿವಳ್ಳಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಆಗಮಿಸುವರು ಎಂದು ತಿಳಿಸಿದರು.