ವಿಜಯಸಾಕ್ಷಿ ಸುದ್ದಿ, ದಾವಣಗೆರೆ : ಮನುಷ್ಯ ಜೀವನದಲ್ಲಿ ಬದಲಾವಣೆ, ಬೆಳವಣಿಗೆ ಎರಡೂ ಅವಶ್ಯಕ. ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಸಂಘಟಿಸಿದ್ದ ಜನಜಾಗೃತಿ ಧರ್ಮ ಸಮಾವೇಶದ 4ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಪ್ರಗತಿಪರವಾದ ಧ್ಯೇಯೋದ್ದೇಶಗಳು ಮಾನವ ಜೀವನದ ಉನ್ನತಿಗೆ ಸಹಕಾರಿಯಾಗಿವೆ. ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಬದುಕು ಉಜ್ವಲಗೊಳ್ಳುತ್ತದೆ. ಸಮಾಜದ ಓರೆ-ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯವಾಗಿದೆ. ಸಂಪತ್ತು ಬೆಳೆದಂತೆ ಸಂಸ್ಕೃತಿ ಬೆಳೆಯಬೇಕು. ಮನುಷ್ಯನ ಬುದ್ಧಿ ಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯಲಾರದ್ದೇ ಇಂದಿನ ಎಲ್ಲ ಆವಾಂತರಗಳಿಗೆ ಕಾರಣವೆಂದರೆ ತಪ್ಪಾಗದು. ವೀರಶೈವ ಧರ್ಮದ ಸಂವಿಧಾನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಕ್ರಿಯಾಶೀಲ ಬದುಕು ಉಜ್ವಲ ಬಾಳಿಗೆ ಸ್ಫೂರ್ತಿಯಾಗಿವೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಾಜಿ ಶಾಸಕ ಡಾ. ಎ.ಎಚ್. ಶಿವಯೋಗಿಸ್ವಾಮಿಯವರು ಮಾತನಾಡಿ, ಆಧ್ಯಾತ್ಮಿಕ ಮತ್ತು ಲೌಕಿಕ ಒಂದೇ ನಾಣ್ಯದ ಎರಡು ಮುಖಗಳು. ಧರ್ಮ ಆಧ್ಯಾತ್ಮಿಕತೆ ಆದರ್ಶ ಬದುಕಿಗೆ ಆಶಾಕಿರಣವಾಗಿವೆ. ಧರ್ಮದ ಆದರ್ಶ ಚಿಂತನೆಗಳು ಭಾರತೀಯರ ಬದುಕಿಗೆ ಸಜ್ಜನಿಕೆಯ ಜೀವ ತುಂಬಿದೆ. ಶ್ರೀ ರಂಭಾಪುರಿ ಜಗದ್ಗುರುಗಳವರ ದೂರದೃಷ್ಟಿ ಮತ್ತು ಸಾಮಾಜಿಕ ಚಿಂತನೆಗಳು ಬದುಕಿನ ವಿಕಾಸಕ್ಕೆ ಅಡಿಪಾಯವಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ, ಅ.ಭಾ.ವೀ ಮಹಾಸಭೆ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ ಅತಿಥಿಗಳಾಗಿದ್ದರು. ಕೈಗಾರಿಕೋದ್ಯಮಿ ಶಿವಗಂಗ ಶ್ರೀನಿವಾಸ ಇವರಿಗೆ ‘ಶ್ರಮ ಸೇವಾ ಸಂಜೀವಿನಿ’ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ತಾವರಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.
ಸಮಾರಂಭದಲ್ಲಿ ಡಾ. ಎಸ್.ಎಸ್. ನೇತ್ರಾವತಿ, ಜಾನಪದ ಕಲಾವಿದ ಮಹೇಶ್ವರಗೌಡ ಲಿಂಗದಹಳ್ಳಿ, ಎಸ್.ಪರಮೇಶ್ವರಪ್ಪ ಬಣಕಾರ, ಜಿ.ಹೆಚ್. ನಾಗರಾಜಪ್ಪ, ವಿರೂಪಾಕ್ಷಪ್ಪ ಅಣಜಿ, ಕೆ.ವಿ. ಗುರುರಾಜ್, ವೀರಮ್ಮ ಆವರಗೊಳ್ಳ, ಪುಷ್ಪ ಆವರಗೊಳ್ಳ ಪಾಲ್ಗೊಂಡಿದ್ದರು.
ಮಳಲಿ ಡಾ. ನಾಗಭೂಷಣ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಹನುಮಾಪುರದ ಸೋಮಶೇಖರ ಶಿವಾಚಾರ್ಯರು, ನಂದಿತಾವರೆ ಸಿದ್ಧಲಿಂಗ ಶಿವಾಚಾರ್ಯರು ಉಪಸ್ಥಿತರಿದ್ದರು.
ಟಿ.ಜಿ. ಸುರೇಶ ಸ್ವಾಗತಿಸಿದರು. ಪಂಚಾಕ್ಷರಯ್ಯನವರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು. ಹರಿಹರದ ಕಾಂತರಾಜ-ವೀರೇಶ ಬಡಿಗೇರ ಸಂಗೀತ ಸೇವೆ ಸಲ್ಲಿಸಿದರು. ಪ್ರೊ.ಮಲ್ಲಯ್ಯ ನಿರೂಪಿಸಿದರು.
ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಇಂತಹ ಧರ್ಮ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ತಂದೆ-ತಾಯಂದಿರು ತಮ್ಮ ಮಕ್ಕಳನ್ನೂ ಕರೆತರಬೇಕು. ಮಕ್ಕಳಲ್ಲಿಯೂ ಧಾರ್ಮಿಕ ಭಾವನೆಗಳನ್ನು ಬೆಳೆಸುವ ಕಾರ್ಯ ಮಾಡಬೇಕು. ಯುವ ಸಮೂಹ ಧರ್ಮ ಕಾರ್ಯಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಂತಾಗಬೇಕು ಎಂದರು.