ಗುವಾಹಟಿ: ಅಸ್ಸಾಂನಲ್ಲಿ ಸೋಮವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಭೂಕಂಪನದ ಕೇಂದ್ರ ಬಿಂದು ಮೋರಿಗಾಂವ್ ಜಿಲ್ಲೆಯಲ್ಲಿ, 50 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದ್ದು, ಬ್ರಹ್ಮಪುತ್ರದ ದಕ್ಷಿಣ ದಂಡೆಯಲ್ಲಿ ಹುಟ್ಟಿಕೊಂಡಿದೆ.
ಭೂಕಂಪನ ಅನುಭವವನ್ನು ಕಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಪೂರ್ವ ಮತ್ತು ಪಶ್ಚಿಮ ಕರ್ಬಿ ಅಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್, ಜೋರ್ಹತ್, ಶಿವಸಾಗರ್, ಚರೈಡಿಯೊ, ಕ್ಯಾಚಾರ್, ಕರೀಮ್ಗಂಜ್, ಹೈಲಕಂಡಿ, ಧುಬ್ರಿ ಜಿಲ್ಲೆಗಳಲ್ಲಿ ಕಾಣಲಾಗಿದೆ. ಭೂಕಂಪನದಿಂದ ಜನರಲ್ಲಿ ಭಯ ಭೀತಿಯು ಉಂಟಾಗಿ ಮನೆಗಳಿಂದ ಹೊರಗೆ ಓಡಿದ್ದಾರೆ.
ಇದರೊಂದಿಗೆ, ಮಧ್ಯ-ಪಶ್ಚಿಮ ಅರುಣಾಚಲ ಪ್ರದೇಶದ ಕೆಲವು ಭಾಗಗಳು, ಇಡೀ ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ಹಲವು ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಗಳು ತಿಳಿಸಿವೆ.



