ಉತ್ತರ ಪ್ರದೇಶದ: ಕಾಸಗಂಜ್ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿರುವ ಘಟನೆ ಬೆಳಕಿಗೆ ಬಂದಿದೆ. ಅಮಾಪುರದ ಕೋಟ್ವಾಲಿ ವ್ಯಾಪ್ತಿಯ ಏಟಾ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪದ ಮನೆಯಲ್ಲಿ ಒಂದೇ ಕುಟುಂಬದ 5 ಜನರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಪತ್ತೆಯಾಗಿದೆ.
ಮೃತರು ಸತ್ಯವೀರ್ ಅಲಿಯಾಸ್ ಶ್ಯಾಮವೀರ್ ‘ಫೌಜಿ’ (50), ಪತ್ನಿ ರಾಮಶ್ರೀ (48), ಪುತ್ರಿಯರಾದ ಪ್ರಾಚಿ (12), ಅಮರವತಿ (10) ಹಾಗೂ ಪುತ್ರ ಗಿರೀಶ್ (9) ಎಂದು ಗುರುತಿಸಲಾಗಿದೆ.
ಕಳೆದ 2-3 ದಿನಗಳಿಂದ ಕುಟುಂಬದವರು ಹೊರಗೆ ಕಾಣಿಸದಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ತೆರಳಿದ್ದಾರೆ. ಒಳಗಿನಿಂದ ಬೀಗ ಹಾಕಲಾಗಿದ್ದ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಭೀಕರ ದೃಶ್ಯ ಎದುರಾಗಿದೆ.
ಸತ್ಯವೀರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಹಾಗೂ ಮೂವರು ಮಕ್ಕಳು ಹಾಸಿಗೆಯ ಮೇಲೆ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಈ ಹಿನ್ನೆಲೆ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಫಾರೆನ್ಸಿಕ್ ತಂಡ ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಥಳೀಯರ ಪ್ರಕಾರ ಆರ್ಥಿಕ ಸಂಕಷ್ಟ ಕುಟುಂಬವನ್ನು ಈ ದುರ್ಘಟನೆಯತ್ತ ತಳ್ಳಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ನಿಖರ ಸತ್ಯ ಹೊರಬರಲು ತನಿಖೆಯ ಫಲಿತಾಂಶ ನಿರ್ಣಾಯಕವಾಗಲಿದೆ.



