ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ ರಸ್ತೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹಸುಗಳ ಶೆಡ್ ಬೆಂಕಿಗೆ ಆಹುತಿಯಾಗಿರುವ ಘಟನೆ ಜರುಗಿದೆ.
ಘಟನೆಯಲ್ಲಿ ಐದು ಹಸುಗಳು ದಾರುಣವಾಗಿ ಸಾವನ್ನಪ್ಪಿದೆ. ತಡರಾತ್ರಿ ಶೆಡ್ ಪಕ್ಕದಲ್ಲಿದ್ದ ಫ್ಲೈವುಡ್ ಸಾಮಗ್ರಿಗಳಿಗೆ ಬೆಂಕಿ ತಗುಲಿದ ಪರಿಣಾಮ, ಕೆಲವೇ ಕ್ಷಣಗಳಲ್ಲಿ ಬೆಂಕಿ ವೇಗವಾಗಿ ಹರಡಿ ಹಸುಗಳ ಶೆಡ್‌ಗೂ ವ್ಯಾಪಿಸಿದೆ. ಬೆಂಕಿಯ ತೀವ್ರತೆ ಹೆಚ್ಚಾದ ಪರಿಣಾಮ ಶೆಡ್‌ನೊಳಗಿದ್ದ ಹಸುಗಳು ಸಿಲುಕಿಕೊಂಡಿದೆ.
ಘಟನೆ ಸಂಭವಿಸಿದ ವೇಳೆ ಶೆಡ್‌ನಲ್ಲಿ ಒಟ್ಟು 19 ಹಸುಗಳಿದ್ದು, ಅವುಗಳಲ್ಲಿ ಐದು ಹಸುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳೀಯರು ತಕ್ಷಣವೇ ಎಚ್ಚರಗೊಂಡು ಕಾರ್ಯಪ್ರವೃತ್ತರಾಗಿ ಉಳಿದ 14 ಹಸುಗಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ಧಾವಿಸಿ, ಹರಡುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಹೆಚ್ಚಿನ ಹಾನಿ ಸಂಭವಿಸದಂತೆ ತಡೆಯಲಾಗಿದೆ.
ಘಟನೆ ಕುರಿತು ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ಕಾಣಿಸಿಕೊಂಡ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.



