ಗದಗ:- ಪ್ರಯಾಗ್ ರಾಜ್ ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿ ಓರ್ವ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು.
ಒಂದೆಡೆ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಸ್ವಪಕ್ಷದವರೇ ಮಾತಿನ ಮೂಲಕ ಬಹಿರಂಗವಾಗಿಯೇ ಕಿತ್ತಾಟಕ್ಕೆ ನಿಂತಿದ್ದಾರೆ.
ಈ ಹೊತ್ತಲ್ಲೇ ಗದಗ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಸಿದ್ದರಾಮಯ್ಯ ಅವರ ಅಭಿಮಾನಿಯಾದ ಯುವಕ ಶಿವಕುಮಾರ ರಾಮಪ್ಪ ಯತ್ನಟ್ಟಿ ಅವರು ಕುಂಭಮೇಳಕ್ಕೆ ಭೇಟಿ ಕೊಟ್ಟು, ಐದು ವರ್ಷಗಳ ಅವಧಿಯವರೆಗೆ ಮುಖ್ಯ ಮಂತ್ರಿಗಳಾಗಿ ಸಿದ್ದರಾಮಯ್ಯನವರೇ ಮುಂದುವರೆಯಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಲ್ಲದೇ ಸಿದ್ದರಾಮಯ್ಯ ನವರ ಭಾವ ಚಿತ್ರವನ್ನು ಹಿಡಿದು ತ್ರಿವೇಣಿ ಸಂಗಮ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಪಕ್ಷದಲ್ಲಿ ಗುಸು-ಗುಸು ಶಬ್ದ ಕೇಳಿ ಬರುವ ಹಿನ್ನೆಲೆಯಲ್ಲಿ ಈ ಯುವಕ ಈ ರೀತಿ ಪೂಜೆಯನ್ನು ಸಲ್ಲಿಸಿ ದೇವರಲ್ಲಿ ಮೊರೆ ಹೋಗಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.