ಬೆಂಗಳೂರು:- ರಾಜ್ಯ ಸರ್ಕಾರವು ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ವಾಹನ ಸವಾರರಿಗೆ ಟ್ರಾಫಿಕ್ ದಂಡದ ಕೇವಲ ಶೇ.50 ರಷ್ಟೇ ಪಾವತಿಸಲು ಅವಕಾಶ ನೀಡಿದ್ದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೂರು ವಾರಗಳಲ್ಲೇ 5,88,127 ಸಂಚಾರ ಉಲ್ಲಂಘನೆ ಪ್ರಕರಣಗಳು ಇತ್ಯರ್ಥವಾಗಿದ್ದು, 16.63 ಕೋಟಿ ರೂ. ದಂಡ ಸಂಗ್ರಹವಾಗಿದೆ. ಸಾರಿಗೆ ಇಲಾಖೆಯ ಪ್ರಸ್ತಾವನೆಯನ್ನು ಸರ್ಕಾರ ಅಂಗೀಕರಿಸಿದ ಬಳಿಕ ಜಾರಿಯಲ್ಲಿರುವ ಈ ರಿಯಾಯಿತಿ ಅವಧಿಗೆ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೆಎಸ್‌ಪಿ, ಬಿಟಿಪಿ, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿದಂತೆ ಆನ್‌ಲೈನ್ ಮೂಲಕವೂ ದಂಡ ಪಾವತಿ ಸೌಲಭ್ಯ ಲಭ್ಯವಿದೆ.
ಟ್ರಾಫಿಕ್ ಪೊಲೀಸ್‌ರನ್ನು ಸಂಪರ್ಕಿಸಿದರೂ ರಿಯಾಯಿತಿ ದಂಡ ಪಾವತಿಸಲು ಅವಕಾಶವಿದೆ. ಡಿ.12ರ ಒಳಗೆ 50% ದಂಡ ಪಾವತಿಸಿ ಪ್ರಕರಣ ಇತ್ಯರ್ಥಗೊಳಿಸಬಹುದು. ಅವಧಿ ಮುಗಿದ ನಂತರ ದಂಡವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕಾಗುತ್ತದೆ. ಇದಕ್ಕೂ ಮೊದಲು ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ನೀಡಿದ ಇದೇ ರೀತಿಯ ರಿಯಾಯಿತಿಯಲ್ಲಿ, ಬೆಂಗಳೂರೊಂದರಲ್ಲೇ 55 ಕೋಟಿ ರೂ.ಗೂ ಹೆಚ್ಚು ದಂಡ ಸಂಗ್ರಹವಾಗಿತ್ತು.



